370ನೇ ವಿಧಿ ರದ್ದತಿ ನಿರ್ಧಾರ ಬೆಂಬಲಿಸಿದರೆ ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡುವುದಾಗಿ ಭಾರತ ಸರ್ಕಾರ ಆಫರ್ ನೀಡಿತ್ತು ಎಂದು ದೇಶಭ್ರಷ್ಟ ಇಸ್ಲಾಂಧರ್ಮಬೋಧಕ ಝಾಕಿರ್ ನಾಯ್ಕ್ ಹೇಳಿದ್ದಾರೆ. ಈ ಕುರಿತು ಸಂದೇಶ ಕಳುಹಿಸಲು ಮಧ್ಯವರ್ತಿಯೊಬ್ಬರನ್ನೂ ಸರ್ಕಾರ ಕಳುಹಿಸಿಕೊಟ್ಟಿತ್ತು ಎಂದು ಅವರು ಹೇಳಿದ್ದಾರೆ.
2016ರಿಂದ ಮಲೇಷ್ಯಾದಲ್ಲಿರುವ ನಾಯ್ಕ್ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊ ಹೇಳಿಕೆ ಪ್ರಕಟಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
‘ನನಗಿರುವ ಸಂಪರ್ಕವನ್ನು ಬಳಸಿಕೊಂಡು ಮುಸ್ಲಿಂ ರಾಷ್ಟ್ರಗಳ ಜತೆ ಬಾಂಧವ್ಯ ವೃದ್ಧಿಸಿಕೊಳ್ಳುವ ಇರಾದೆಯೂ ಸರ್ಕಾರಕ್ಕಿತ್ತು ಎಂಬುದನ್ನು ಮಧ್ಯವರ್ತಿ ತಿಳಿಸಿದ್ದರು’ ಎಂದೂ ನಾಯ್ಕ್ ಹೇಳಿದ್ದಾರೆ.
‘ಇದೇ ಬಿಜೆಪಿ ಕಳೆದ ಮೂರೂವರೆ ವರ್ಷಗಳಿಂದ ನನ್ನನ್ನು ಕಾಡಿತ್ತು. ಅದೇ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿ 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಾಡಿದ ಭಾಷಣದಲ್ಲಿ 2 ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಕನಿಷ್ಠ 9 ಬಾರಿ ನನ್ನ ಹೆಸರು ಉಲ್ಲೇಖಿಸಿದ್ದರು. ಅವರೀಗ ನನ್ನನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲಿದ್ದಾರೆಯೇ?’ ಎಂದು ನಾಯ್ಕ್ ಹೇಳಿದ್ದಾರೆ.
370ನೇ ವಿಧಿ ರದ್ದತಿ ಅಸಾಂವಿಧಾನಿಕ. ಕಾಶ್ಮೀರಿಗಳಿಗೆ ಅನ್ಯಾಯ ಎಸಗುವ ನಿರ್ಧಾರ. ಹಾಗಾಗಿ ಸರ್ಕಾರದ ಆಫರ್ ತಿರಸ್ಕರಿಸಿದ್ದೆ ಎಂದೂ ಅವರು ಹೇಳಿದ್ದಾರೆ.
ಕೊನೆಯಲ್ಲಿ ಭಾರತೀಯ ಮುಸ್ಲಿಮರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ನಾಯ್ಕ್, ‘ಅನ್ಯಾಯದ ವಿರುದ್ಧ ದನಿಯೆತ್ತುವುದು ಒಳ್ಳೆಯದು. ನೀವು ಭಯಪಡುತ್ತಿದ್ದೀರಿ ಎಂದಾದರೆ ಮೌನವಾಗಿರಬಹುದು. ಆದರೆ, ಅನ್ಯಾಯವನ್ನು ಬೆಂಬಲಿಸುವುದು ಇಸ್ಲಾಮಿಕ್ ಅಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.