ನವದೆಹಲಿ: ಬಾಂಗ್ಲಾದೇಶವು ಮತ್ತೊಂದು ಅಫ್ಗಾನಿಸ್ತಾನವಾಗುವತ್ತ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಲೇಖಕಿ ತಸ್ಲೀಮಾ ನಸ್ರೀನ್, ಇಸ್ಲಾಂ ಮೂಲಭೂತವಾದಿಗಳು ಬಾಂಗ್ಲಾ ಯುವಕರು 'ಭಾರತ ವಿರೋಧಿ, ಹಿಂದೂ ವಿರೋಧಿ ಮತ್ತು ಪಾಕಿಸ್ತಾನ ಪರ' ಆಲೋಚನೆ ಹೊಂದುವಂತೆ ಮನಃಪರಿವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದ ನಿರಂಕುಶ ಸರ್ಕಾರದ ವಿರುದ್ಧ ಶುರುವಾದ ವಿದ್ಯಾರ್ಥಿಗಳ ಪ್ರತಿಭಟನೆಗೆ ಆರಂಭದಲ್ಲಿ ತಾವು ಮತ್ತು ಇತರರು ಬೆಂಬಲ ನೀಡಿದ್ದೆವು ಎಂದು ಹೇಳಿರುವ ಲೇಖಕಿ, ಇತ್ತೀಚೆಗೆ ಹಿಂದೂಗಳ ಮೇಲಿನ ಹಿಂಸಾಚಾರ, ಪತ್ರಕರ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಹಾಗೂ ಉಗ್ರರನ್ನು ಜೈಲುಗಳಿಂದ ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ, ಇದು ವಿದ್ಯಾರ್ಥಿ ಚಳವಳಿಯಲ್ಲ. ಇಸ್ಲಾಂ ಜಿಹಾದಿಗಳ ಯೋಜಿತ ಮತ್ತು ಪ್ರಾಯೋಜಿಕತ್ವದ ಪ್ರತಿಭಟನೆ ಎನಿಸುತ್ತಿದೆ ಎಂದಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಸ್ರೀನ್, 'ಮೀಸಲಾತಿ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಜುಲೈನಲ್ಲಿ ಪ್ರತಿಭಟನೆ ಆರಂಭಿಸಿದಾಗ, ಮಹಿಳಾ ಹಕ್ಕು, ಮಾನವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿದ್ದ ನಾವೆಲ್ಲರೂ ಬೆಂಬಲ ಸೂಚಿಸಿದ್ದೆವು. ಮಾಜಿ ಪ್ರಧಾನಿ ಹಸೀನಾ ಅವರು ಸದಾ ಮೂಲಭೂತವಾದಿಗಳನ್ನು ಬೆಂಬಲಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿರಂಕುಶ ಆಡಳಿತ ನಡೆಸುತ್ತಿದ್ದರು. ಅವರ ವಿರುದ್ಧ ಜನರು ಆಕ್ರೋಶಗೊಂಡಿದ್ದರು' ಎಂದು ಹೇಳಿದ್ದಾರೆ.
'ಇದು ವಿದ್ಯಾರ್ಥಿಗಳ ಹೋರಾಟವಷ್ಟೇ ಅಲ್ಲ. ಯೋಜಿತ ಮತ್ತು ನಿಷೇಧಿತ ಉಗ್ರ ಸಂಘಟನೆಗಳು, ಇಸ್ಲಾಂ ಜಿಹಾದಿಗಳಿಂದ ಪ್ರಾಯೋಜಿತ ಪ್ರತಿಭಟನೆ ಎಂಬುದು ನಂತರ ಅರಿವಾಯಿತು' ಎಂದು ವಿವರಿಸಿದ್ದಾರೆ.
'ಯಾವಾಗ ಅವರು ಎಲ್ಲವನ್ನೂ ಧ್ವಂಸಗೊಳಿಸಲಾರಂಭಿಸಿದರೋ, ಎಲ್ಲ ಪ್ರತಿಮೆಗಳನ್ನು, ಕಲಾಕೃತಿಗಳನ್ನು, ವಸ್ತುಸಂಗ್ರಹಾಲಯಗಳನ್ನು ಕೆಡವಲಾರಂಭಿಸಿದರೋ ಆಗ ನಮಗೆ ಗೊತ್ತಾಯಿತು. ಹಿಂದೂಗಳ ಮೇಲೆ ದಾಳಿ ಮಾಡಿದ್ದು, ಹತ್ಯೆ ಮಾಡಿದ ರೀತಿ; ದುಸ್ವಪ್ನದಂತೆ ಕಾಡುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಇದೀಗ ಪತ್ರಕರ್ತರ ವಿರುದ್ಧ, ಹಸೀನಾ ಆಪ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ದಿನಕಳೆದಂತೆ ಅವರು ನಿಜವಾದ ಮುಖವನ್ನು ಮತ್ತು ಮುಖ್ಯ ಉದ್ದೇಶವನ್ನು ಬಹಿರಂಗಪಡಿಸುತ್ತಿದ್ದಾರೆ. ಜೈಲಿನಲ್ಲಿದ್ದ ಎಲ್ಲ ಭಯೋತ್ಪಾದಕರ ಬಿಡುಗಡೆಗೊಳಿಸಲಾಗಿದೆ. ಹೋರಾಟವೀಗ ವಿದ್ಯಾರ್ಥಿ ಪ್ರತಿಭಟನೆಯಾಗಿಷ್ಟೇ ಉಳಿದಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
ನಸ್ರೀನ್ ಅವರು ತಮ್ಮ ಪುಸ್ತಕಗಳಿಗೆ ನಿಷೇಧ ಹಾಗೂ ಇಸ್ಲಾಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಎದುರಾದ ಬಳಿಕ 1994ರಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.