ನವದೆಹಲಿ: ಮುಂಬೈ ದಾಳಿಗೆ ಕಾರಣವಾಗಿದ್ದ ಲಷ್ಕರ್–ಎ–ತಯಬಾ (ಎಲ್‌ಇಟಿ) ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಇಸ್ರೇಲ್ ಘೋಷಿಸಿದೆ.
ಎಲ್‌ಇಟಿ ‘ಮಾರಣಾಂತಿಕ’ ಮತ್ತು ‘ಖಂಡನೀಯ’ ಭಯೋತ್ಪಾದಕ ಸಂಘಟನೆಯಾಗಿದೆ ಎಂದಿರುವ ಇಸ್ರೇಲ್, ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಭಾರತಕ್ಕೆ ಬಂದಿದ್ದ ಎಲ್‌ಇಟಿ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. 60 ಗಂಟೆ ಕಾರ್ಯಾಚರಣೆ ನಡೆದಿತ್ತು. 18 ಭದ್ರತಾ ಸಿಬ್ಬಂದಿ, ಪೊಲೀಸರು ಸೇರಿ 166 ಜನರು ಮೃತಪಟ್ಟಿದ್ದರು.
ಭಯೋತ್ಪಾದನಾ ವಿರೋಧಿ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ ಸಲಾಸ್ಕರ್, ಎಎಸ್‌ಐ ತುಕಾರಾಂ ಒಂಬ್ಲೆ ಅವರು ಮೃತಪಟ್ಟವರಲ್ಲಿ ಸೇರಿದ್ದರು.
ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಒಬೆರಾಯ್ ಟ್ರಿಡೆಂಟ್ ತಾರಾ ಹೋಟೆಲ್, ಲಿಯೊಪೊಲ್ಡ್ ಕೆಫೆ, ಕ್ಯಾಮಾ ಹಾಸ್ಪಿಟಲ್, ನಾರಿಮನ್ ಹೌಸ್ ಅನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಒಂಬತ್ತು ಉಗ್ರರು ಹತರಾಗಿದ್ದರು.
ದಾಳಿಯಲ್ಲಿ ಜೀವಂತವಾಗಿ ಸಿಕ್ಕುಬಿದ್ದಿದ್ದ ಉಗ್ರ ಅಜ್ಮಲ್ ಕಸಬ್‌ನನ್ನು, 2012ರ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.