ಟೆಲ್ ಅವಿವ್: ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವೆ ಸಂಘರ್ಷ ಭಾನುವಾರವೂ ಮುಂದುವರಿದಿದೆ. ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಗಾಜಾದಲ್ಲಿನ ಕೆಲವು ಕಟ್ಟಡಗಳು ನೆಲಸಮವಾಗಿವೆ.
ಈ ನಡುವೆ ಇಸ್ರೇಲಿನ ಉತ್ತರ ಭಾಗದಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರು ಹಾಗೂ ಇಸ್ರೇಲ್ ಸೇನೆಯ ನಡುವೆ ಚಕಮಕಿ ನಡೆದಿದೆ. ಸಂಘರ್ಷವು ವ್ಯಾಪಕಗೊಳ್ಳುವ ಭೀತಿಯನ್ನು ಇದು ಹುಟ್ಟುಹಾಕಿದೆ.
ಹಮಾಸ್ ಬಂಡುಕೋರರು ನಡೆಸಿದ ದಾಳಿಗೆ ಇಸ್ರೇಲ್‌ನಲ್ಲಿ ಕನಿಷ್ಠ 600 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಸ್ರೇಲ್‌ನಲ್ಲಿ ಈಚಿನ ದಶಕಗಳಲ್ಲಿ ಈ ಪ್ರಮಾಣದಲ್ಲಿ ಜನರ ಸಾವಿಗೆ ಕಾರಣವಾದ ಸಂಘರ್ಷ ಸೃಷ್ಟಿಯಾಗಿರಲಿಲ್ಲ. ಗಾಜಾದಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಬಂಡುಕೋರರು ಒತ್ತೆಯಾಳುಗಳನ್ನು ಗಾಜಾದ ಕಡೆ ಒಯ್ದಿದ್ದಾರೆ. ಒತ್ತೆಯಾಳುಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಇದ್ದಾರೆ. ಇಸ್ರೇಲ್‌ನ ಸೆರೆಮನೆಗಳಲ್ಲಿ ಇರುವ ಪ್ಯಾಲೆಸ್ಟೀನ್ ಕೈದಿಗಳ ಬಿಡುಗಡೆಗೆ ಒತ್ತಡ ಹೇರಲು ಬಂಡುಕೋರರು ಇವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಬಂಡುಕೋರರ ದಾಳಿಗೆ ಇಸ್ರೇಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಬಲಿಯಾಗಿರುವುದು ಗುಪ್ತದಳದ ವೈಫಲ್ಯವನ್ನು ತೋರಿಸಿದೆ. ಗಾಜಾದಲ್ಲಿ ಏನೇ ಆದರೂ ಇಸ್ರೇಲ್‌ಗೆ ಗೊತ್ತಾಗುತ್ತದೆ ಎಂಬ ನಂಬಿಕೆಯನ್ನು ಈಗಿನ ಸಂಘರ್ಷವು ಸುಳ್ಳಾಗಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ದೇಶವು ಬಂಡುಕೋರರ ವಿರುದ್ಧ ಸಮರ ಸಾರಿದೆ ಎಂದು ಶನಿವಾರವೇ ಹೇಳಿದ್ದರು. ನೆತನ್ಯಾಹು ನೇತೃತ್ವದ ಇಸ್ರೇಲ್ ಭದ್ರತಾ ಮಂಡಳಿಯು ಭಾನುವಾರ ಸಭೆ ಸೇರಿ, ‘ದೇಶವು ಯುದ್ಧ ಸಾರಿದೆ’ ಎಂಬ ಅಧಿಕೃತ ಘೋಷಣೆ ಹೊರಡಿಸಿದೆ.
ಭಾನುವಾರ ಹೊರಡಿಸಲಾದ ಈ ಘೋಷಣೆಯು ‘ಗಮನಾರ್ಹ ಪ್ರಮಾಣದಲ್ಲಿ ಸೇನಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅಧಿಕಾರ ನೀಡುತ್ತದೆ’ ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಆದರೆ ಈ ಘೋಷಣೆಯ ಪರಿಣಾಮಗಳ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. ಇಸ್ರೇಲ್ ಕಳೆದ ನಾಲ್ಕು ದಶಕಗಳಲ್ಲಿ ಲೆಬನಾನ್ ಮತ್ತು ಗಾಜಾದಲ್ಲಿ ಭಾರಿ ಪ್ರಮಾಣದ ಸೇನಾ ಕಾರ್ಯಾಚರಣೆಗಳನ್ನು ನಡೆಸಿದೆ. ಆದರೆ ಇವುಗಳಲ್ಲಿ ಯಾವುದನ್ನೂ ಅಧಿಕೃತವಾಗಿ ‘ಯುದ್ಧ’ ಎಂದು ಕರೆದಿರಲಿಲ್ಲ.
ಈಗ, ಇಸ್ರೇಲ್ ಭೂಸೇನೆಯ ಮೂಲಕವೂ ಗಾಜಾದ ಮೇಲೆ ದಾಳಿ ಶುರುಮಾಡಲಿದೆಯೇ ಎಂಬ ಪ್ರಶ್ನೆ ಇದೆ. ಹಮಾಸ್ ಬಂಡುಕೋರರು ‘ಹಿಂದೆಂದೂ ಕಾಣದಂತಹ ಬೆಲೆ ತೆರಬೇಕಾಗುತ್ತದೆ’ ಎಂದು ನೆತನ್ಯಾಹು ಅವರು ಎಚ್ಚರಿಸಿದ್ದಾರೆ. ಆದರೆ ‘ಈ ಯುದ್ಧವು ಬಹುಕಾಲ ನಡೆಯುತ್ತದೆ, ಇದು ಕಷ್ಟದ ಯುದ್ಧವೂ ಆಗಿರಲಿದೆ’ ಎಂದು ಹೇಳಿದ್ದಾರೆ.
ಇಸ್ರೇಲ್‌ನ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಭದ್ರತಾ ಪಡೆಗಳು 400 ಬಂಡುಕೋರರನ್ನು ಹತ್ಯೆ ಮಾಡಿವೆ, ಹಲವರನ್ನು ಬಂಧಿಸಿವೆ. ಇಸ್ರೇಲ್ ಸೇನೆಯು ಅರೇಬಿಕ್ ಭಾಷೆಯಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದ ನಂತರದಲ್ಲಿ ಗಾಜಾದಲ್ಲಿನ ಗಡಿ ಭಾಗಗಳ ಜನರು, ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಒಳ ಪ್ರದೇಶಗಳಿಗೆ ಪಲಾಯನ ಮಾಡಿದ್ದಾರೆ.
ಇಸ್ರೇಲ್‌ನ ನೆರೆಯ ರಾಷ್ಟ್ರ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಇಸ್ರೇಲ್‌ನ ಇಬ್ಬರು ಪ್ರವಾಸಿಗರನ್ನು ಹತ್ಯೆ ಮಾಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.