ಖಾನ್ ಯೂನಿಸ್: ಇಸ್ರೇಲ್‌ನ ಯೋಧರು ಗಾಜಾದ ಉತ್ತರ ಮತ್ತು ಮಧ್ಯ ಭಾಗದ ಮೇಲೆ ಸೋಮವಾರ ದಾಳಿ ನಡೆಸಿದ್ದಾರೆ. ಗಾಯಗೊಂಡವರು ಹಾಗೂ ಪ್ಯಾಲೆಸ್ಟೀನ್ ನಿರಾಶ್ರಿತರು ಆಸರೆ ಪಡೆದುಕೊಂಡಿರುವ ಆಸ್ಪತ್ರೆಗಳ ಸನಿಹದಲ್ಲೇ ಇಸ್ರೇಲ್ ವಾಯುದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇಸ್ರೇಲ್‌ನ ಯುದ್ಧ ಟ್ಯಾಂಕ್ ಹಾಗೂ ಬುಲ್ಡೋಜರ್ ಗಾಜಾದ ಕೇಂದ್ರ ಭಾಗದಲ್ಲಿ ಹೆದ್ದಾರಿಯೊಂದನ್ನು ಬಂದ್ ಮಾಡಿರುವ ದೃಶ್ಯಾವಳಿಯೊಂದು ಸುದ್ದಿಸಂಸ್ಥೆಗೆ ಲಭ್ಯವಾಗಿದೆ. ಈ ಹೆದ್ದಾರಿಯನ್ನು ಪ್ಯಾಲೆಸ್ಟೀನ್ ನಾಗರಿಕರು ಇಸ್ರೇಲ್ ವಾಯುದಾಳಿಯಿಂದ ತಪ್ಪಿಸಿಕೊಳ್ಳಲು ಗಾಜಾದ ಉತ್ತರ ಭಾಗದಿಂದ ದಕ್ಷಿಣಕ್ಕೆ ಬರಲು ಬಳಸುತ್ತಾರೆ.
ಈ ವಿಡಿಯೊದಲ್ಲಿ, ರಸ್ತೆಗೆ ಅಡ್ಡಿಯಾಗಿ ಏನೋ ಇದೆ ಎಂಬುದನ್ನು ಗಮನಿಸಿ ಒಂದು ಕಾರು ವಾಪಸ್ ಬರಲು ಅನುವಾಗುತ್ತದೆ. ಆಗ ಆ ಕಾರಿನ ಮೇಲೆ ಟ್ಯಾಂಕ್‌ನಿಂದ ದಾಳಿ ನಡೆಯುತ್ತದೆ, ಕಾರು ಹೊತ್ತಿ ಉರಿಯುತ್ತದೆ. ಇದನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರೊಬ್ಬರು ‘ಹಿಂದಕ್ಕೆ ಹೋಗಿ’ ಎಂದು ಭಯದಿಂದ ಕಿರುಚಿಕೊಂಡಿದ್ದಾರೆ.
ಇಸ್ರೇಲ್ ಪಡೆ ಹಾಗೂ ಹಮಾಸ್ ಬಂಡುಕೋರರ ನಡುವೆ ವಸತಿ ಪ್ರದೇಶದಲ್ಲಿ ಕದನ ಶುರುವಾದಲ್ಲಿ, ಎರಡೂ ಕಡೆಗಳಲ್ಲಿ ಸಾವಿನ ಸಂಖ್ಯೆಯು ತೀವ್ರವಾಗಿ ಹೆಚ್ಚಾಗುವ ಭೀತಿ ಇದೆ. ಹೆದ್ದಾರಿಯನ್ನು ಬಂದ್ ಮಾಡಿರುವುದು ತೆರವಾಗದೆ ಇದ್ದಲ್ಲಿ, ಉತ್ತರ ಭಾಗದಲ್ಲಿ ಇರುವ ಪ್ಯಾಲೆಸ್ಟೀನ್ ನಾಗರಿಕರಿಗೆ ದಕ್ಷಿಣ ಭಾಗಕ್ಕೆ ಬರಲು ಅವಕಾಶವೇ ಇಲ್ಲದಂತಾಗುತ್ತದೆ.
ಉತ್ತರ ಗಾಜಾದಲ್ಲಿ ಅಂದಾಜು 1.17 ಲಕ್ಷ ಮಂದಿ ಪ್ಯಾಲೆಸ್ಟೀನ್ ನಾಗರಿಕರು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಗಳು ಸುರಕ್ಷಿತ ಸ್ಥಳಗಳು ಎಂಬುದು ಅವರ ಲೆಕ್ಕಾಚಾರ.
ಇಸ್ರೇಲ್ ಸೇನೆಯು ಗಾಜಾದ ಉತ್ತರದ ಕಡೆಯಿಂದ ನಗರವನ್ನು ಪ್ರವೇಶಿಸುತ್ತಿರುವಂತಿದೆ. ಸಿರಿಯಾ ಕಡೆಯಿಂದ ಬಂದ ರಾಕೆಟ್ ಇಸ್ರೇಲ್‌ನ ಭೂಪ್ರದೇಶದಲ್ಲಿ ಬಿದ್ದ ನಂತರದಲ್ಲಿ ಇಸ್ರೇಲ್ ಸಿರಿಯಾ ಮೇಲೆ ದಾಳಿ ನಡೆಸಿದೆ. ಸೋಮವಾರ ಬೆಳಿಗ್ಗೆ ಯುದ್ಧ ವಿಮಾನಗಳು ಸಿರಿಯಾದ ಮಿಲಿಟರಿ ಮೂಲಸೌಕರ್ಯದ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.