ರಮಲ್ಲಾ: ವೆಸ್ಟ್ ಬ್ಯಾಂಕ್‌ನ ರಮಲ್ಲಾದಲ್ಲಿರುವ ತನ್ನ ಕಚೇರಿಯ ಮೇಲೆ ದಾಳಿ ನಡೆಸಿದ ಸಶಸ್ತ್ರ ಮತ್ತು ಮಾಸ್ಕ್ ಧರಿಸಿದ್ದ ಇಸ್ರೇಲಿ ಪಡೆಗಳು, 45 ದಿನಗಳವರೆಗೆ ಮುಚ್ಚುವ ಆದೇಶವನ್ನು ಹೊರಡಿಸಿವೆ ಎಂದು ಅಲ್ ಜಜೀರಾ ಸುದ್ದಿವಾಹಿನಿ ಹೇಳಿದೆ.
ಗಾಜಾ ಯುದ್ಧದ ಸಮಯದಿಂದ ಅರಬ್ ವಾಹಿನಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ದ್ವೇಷ ಉಂಟಾಗಿತ್ತು. ಅದೀಗ ವಾಹಿನಿ ಕಚೇರಿಯ ಬಾಗಿಲು ಮುಚ್ಚಿಸುವ ಹಂತಕ್ಕೆ ತಲುಪಿದೆ.
ಕಳೆದ ವರ್ಷದ ಅಕ್ಟೋಬರ್ 7ರಂದು ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಆ ಬಳಿಕ ಇಸ್ರೇಲ್ ಕಾರ್ಯಾಚರಣೆ ಘೋಷಿಸಿತ್ತು. ಈ ಯುದ್ಧದ ಪರಿಣಾಮಗಳ ಕುರಿತು ಅಲ್ ಜಜೀರಾ ನಿರಂತರ ವರದಿ ಪ್ರಸಾರ ಮಾಡಿತ್ತು.
ಕತಾರ್ ಮೂಲದ ವಾಹಿನಿಯ ಪತ್ರಕರ್ತರು ಹಮಾಸ್ ಅಥವಾ ಅದರ ಇಸ್ಲಾಮಿಕ್ ಜಿಹಾದಿಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂಬುದು ಇಸ್ರೇಲ್‌ನ ಸೇನೆಯ ಆರೋಪ.
ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಅಲ್ ಜಜೀರಾ, ಗಾಜಾ ಪಟ್ಟಿಯಲ್ಲಿರುವ ತನ್ನ ಸಿಬ್ಬಂದಿಯನ್ನು ಇಸ್ರೇಲ್ ಗುರಿಯಾಗಿಸುತ್ತಿದೆ ಎಂದು ಹೇಳಿದೆ.
ಗಾಜಾ ಯುದ್ಧ ಆರಂಭವಾದಾಗಿನಿಂದ ವಾಹಿನಿಯ ನಾಲ್ವರು ಪತ್ರಕರ್ತರು ಹತ್ಯೆಯಾಗಿದ್ದಾರೆ. ಗಾಜಾದಲ್ಲಿನ ವಾಹಿನಿ ಕಚೇರಿಯ ಮೇಲೆ ಬಾಂಬ್ ದಾಳಿಯೂ ನಡೆದಿದೆ ಎಂದು ಅದು ಹೇಳಿದೆ.
‘ವಾಹಿನಿಯ ಕಚೇರಿ ಮುಚ್ಚಿಸಲು ಸೂಚಿಸಿದ ಸೇನಾ ಪಡೆಗಳು ಸ್ಪಷ್ಟ ಕಾರಣ ತಿಳಿಸಲಿಲ್ಲ. ಎಲ್ಲ ಕ್ಯಾಮೆರಾಗಳನ್ನು ತೆಗೆದುಕೊಂಡು ಈ ಕ್ಷಣ ಕಚೇರಿ ತ್ಯಜಿಸಿ ಎಂದು ಹೇಳಿದ್ದಾಗಿ’ ವಾಹಿನಿ ತಿಳಿಸಿದೆ.
ತನಗೆ ನೀಡಲಾಗಿರುವ ಆದೇಶದಲ್ಲಿ, ಭಯೋತ್ಪಾದನೆಗೆ ಬೆಂಬಲಿಸುತ್ತಿರುವ ಮತ್ತು ಪ್ರಚೋದಿಸುತ್ತಿರುವ ಆರೋಪ ಮಾಡಲಾಗಿದೆ ಎಂದು ವಾಹಿನಿಯ ವೆಸ್ಟ್ ಬ್ಯಾಂಕ್ ಬ್ಯೂರೊದ ಮುಖ್ಯಸ್ಥ ವಾಲಿದ್ ಅಲ್ ಒಮರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.