ADVERTISEMENT

ಯುದ್ಧ, ಹಸಿವು... ಕುಟುಂಬ ಪೊರೆಯಲು ಹೆಣಗಾಡುತ್ತಿರುವ ಗಾಜಾದ ಮೀನುಗಾರರು

ರಾಯಿಟರ್ಸ್
Published 3 ನವೆಂಬರ್ 2024, 13:31 IST
Last Updated 3 ನವೆಂಬರ್ 2024, 13:31 IST
<div class="paragraphs"><p>ಖಾನ್‌ ಯೂನಿಸ್‌ನ ಸಮುದ್ರ ದಡದಲ್ಲಿ ಮೀನಿಗಾಗಿ ಬಲೆ ಬೀಸಿರುವ ಬಾಲಕ</p></div>

ಖಾನ್‌ ಯೂನಿಸ್‌ನ ಸಮುದ್ರ ದಡದಲ್ಲಿ ಮೀನಿಗಾಗಿ ಬಲೆ ಬೀಸಿರುವ ಬಾಲಕ

   

–ರಾಯಿಟರ್ಸ್ ಚಿತ್ರ

ಖಾನ್ ಯೂನಿಸ್: ಒಂದು ವರ್ಷವಾದರೂ ನಿಲ್ಲದ ಯುದ್ಧದ ಕಾವು, ನಿತ್ಯ ಕಾಡುವ ಘೋರ ಹಸಿವಿನ ನೋವಿನೊಂದಿಗೆ ಸಮುದ್ರ ದಡದಲ್ಲಿ ಒಟ್ಟು ಸೇರಿರುವ ಪ್ಯಾಲೆಸ್ಟೀನಿನ ಬೆಸ್ತರು, ಸಾಕಷ್ಟು ಮೀನು ಸಿಗಬಹುದೆಂಬ ಆಸೆಯಲ್ಲಿ ಬಲೆ ಎಸೆಯುತ್ತಾರೆ. ಹತಾಶೆ ತುಂಬಿದ ಕಂಗಳಲ್ಲಿ ತಮ್ಮ ಕುಟುಂಬಗಳಿಗೆ ಬೇಕಾದಷ್ಟು ಮೀನು ಸಿಗಬಹುದು ಎನ್ನುವ ಭರವಸೆಯೂ ಇದೆ.

ADVERTISEMENT

2023 ಅಕ್ಟೋಬರ್‌ನಲ್ಲಿ ಹಮಾಸ್ ಬಂಡುಕೋರರು ತನ್ನ ಮೇಲೆ ದಾಳಿ ಮಾಡಿದ ಬಳಿಕ, ಗಾಜಾ ವಿರುದ್ಧ ಇಸ್ರೇಲ್ ಯುದ್ಧ ಸಾರಿದೆ. ಇದು ಅಲ್ಲಿನ ಮೀನುಗಾರರ ಜೀವನವನ್ನು ದುಸ್ತರವಾಗಿಸಿದೆ. ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡಲಾಗದೆ, ದಡದಿಂದಲೇ ಬಲೆ ಎಸೆಯುತ್ತಿದ್ದಾರೆ.

ಯುದ್ಧದಿಂದ ನಿರಾಶ್ರಿತರಾಗಿ ಖಾನ್ ಯೂನಿಸ್‌ನ ಸಮುದ್ರ ತಟದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿರುವ 71 ವರ್ಷದ ಇಬ್ರಾಹಿಂ ಘುರಾಬ್‌ ಹಾಗೂ 24 ವರ್ಷದ ವಸೀಂ ಅಲ್‌ ಮಸ್ರಿ ಬಲೆ ಎಸೆದು ಬೂತಾಯಿ ಮೀನಿಗಾಗಿ ಅರಸುತ್ತಿದ್ದರು.

‘ಬದುಕು ಕಷ್ಟವಾಗಿದೆ’ ಮಾತಿಗೆ ನಿಂತರು ಘುರಾಬ್. ‘ಆಹಾರ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಯಾವ ಸಹಾಯವೂ ಇಲ್ಲ. ನಮಗೆ ಏನೂ ಸಿಗುತ್ತಿಲ್ಲ. ಆರಂಭದಲ್ಲಿ ನಮಗೆ ಇಂದಿಷ್ಟು ಆಹಾರ ಸಿಗುತ್ತಿತ್ತು, ಆದರೆ ಈಗ ಅದೂ ಸಿಗುತ್ತಿಲ್ಲ’ ಘುರಾಬ್ ಮಾತಿನಲ್ಲಿ ನೋವಿತ್ತು.

ಘುರಾಬ್ ಮತ್ತು ಮಸ್ರಿಯಂತಹ ಮೀನುಗಾರರು ತಮ್ಮ ಕುಟುಂಬಗಳಿಗೆ ಬೇಕಾದಷ್ಟು ಮೀನುಗಳನ್ನು ತರಲು ಪ್ರತಿದಿನ ಹೆಣಗಾಡುತ್ತಾರೆ. ಸ್ವಂತ ಬಳಕೆಗೆ ಮಿಕ್ಕಿ ಬೇರೆಯವರಿಗೆ ಮಾರಲು ಸಿಕ್ಕರೆ ಅದೃಷ್ಠ.

ಯುದ್ಧಕ್ಕಿಂತ ಮುಂಚೆ ಗಾಜಾದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಕಸುಬಾಗಿತ್ತು. ನಿತ್ಯ ಆಹಾರದ ಭಾಗವಾಗಿದ್ದ ಮೀನು, ಆದಾಯದ ಪ್ರಮುಖ ಮೂಲವಾಗಿತ್ತು. ಸಮುದ್ರದಿಂದ ಹಿಡಿದು ತಂದ ಮೀನುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗಿಡಲಾಗುತ್ತಿತ್ತು.

ಆದರೆ ಈಗ ಮೀನುಗಾರಿಕೆಗೆ ಇಸ್ರೇಲ್ ದಿಗ್ಬಂಧನ ವಿಧಿಸಿದ್ದಲ್ಲದೆ, ಪದೇ ಪದೇ ನಡೆಯುತ್ತಿರುವ ದಾಳಿಯಿಂದಾಗಿ ಹಲವು ಮಂದಿಯ ಆದಾಯ ಮೂಲ ನಿಂತು ಹೋಗಿದೆ. ನಿತ್ಯದ ಅಗತ್ಯ ವಸ್ತುಗಳೂ ಸಿಗುತ್ತಿಲ್ಲ.

‘ನಮಗೆ ಆದಾಯವೂ ಇಲ್ಲ, ನಮ್ಮ ಜೀವನವೂ ಅಪಾಯದಲ್ಲಿದೆ’ ಎಂದು ಇಸ್ರೇಲ್ ಪಡೆಗಳು ಸಮುದ್ರದಿಂದ ಮೀನುಗಾರರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಯನ್ನು ವಿವರಿಸಿದರು ಮಸ್ರಿ.

‘ಖಾನ್ ಯೂನಿಸ್‌ನಲ್ಲಿರುವ ನಮ್ಮ ಮೀನುಗಾರಿಕಾ ದೋಣಿಯ ಮೇಲೆಯೇ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ’ ಎಂದರು ಘುರಾಬ್.

ಮೀನುಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆಯೇ ಎನ್ನುವ ‘ರಾಯಿಟರ್ಸ್’ ‍ಕೇಳಿದ ಪ್ರಶ್ನೆಗೆ ಇಸ್ರೇಲ್ ಸೇನೆಯಿಂದ ಯಾವುದೇ ಉತ್ತರ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.