ADVERTISEMENT

Iran–Israel Conflict: ಇಸ್ರೇಲ್ ಮೇಲೆ ಇರಾನ್‌ ದಾಳಿ

‘ಸಿರಿಯಾದ ದೂತಾವಾಸ ಕಚೇರಿ ಮೇಲಿನ ದಾಳಿಗೆ ಪ್ರತೀಕಾರ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 23:30 IST
Last Updated 14 ಏಪ್ರಿಲ್ 2024, 23:30 IST
   

ಟೆಲ್ ಅವಿವ್/ಜೆರುಸಲೇಂ/ದುಬೈ/ವಾಷಿಂಗ್ಟನ್: ಇಸ್ರೇಲ್‌ ಮೇಲೆ ಇರಾನ್‌ ಇದೇ ಮೊದಲ ಬಾರಿಗೆ ನೇರವಾಗಿ ಸೇನಾ ದಾಳಿ ನಡೆಸಿದೆ. ಆದರೆ, ಇರಾನ್‌ ಕಡೆಯಿಂದ ಭಾನುವಾರ ನುಗ್ಗಿಬಂದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಪೈಕಿ ಶೇಕಡ 99ರಷ್ಟನ್ನು ಆಗಸದಲ್ಲಿಯೇ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಸಿರಿಯಾದಲ್ಲಿ ಇರುವ ಇರಾನ್‌ನ ದೂತಾವಾಸ ಕಚೇರಿಯ ಮೇಲೆ ಈ ತಿಂಗಳ ಆರಂಭದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್‌, ಇಸ್ರೇಲ್‌ ಮೇಲೆ ಭಾನುವಾರ ನಸುಕಿನಲ್ಲಿ ದಾಳಿ ನಡೆಸಿದೆ. ಸಿರಿಯಾದಲ್ಲಿನ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಇರಾನ್‌ನ ಸೇನೆಯ ಅಧಿಕಾರಿಗಳು ಮೃತಪಟ್ಟಿದ್ದರು. ಭಾನುವಾರದ ದಾಳಿಯಲ್ಲಿ ಇರಾನ್‌ 30ಕ್ಕೂ ಹೆಚ್ಚು ಕ್ಷಿಪಣಿಗಳನ್ನು, 170 ಡ್ರೋನ್‌ಗಳನ್ನು ಹಾಗೂ 120ಕ್ಕೂ ಹೆಚ್ಚು ಗುರಿನಿರ್ದೇಶಿತ ಕ್ಷಿಪಣಿಗಳನ್ನು ಬಳಸಿದೆ ಎಂದು ಇಸ್ರೇಲ್ ಹೇಳಿದೆ.

ಇರಾನ್‌ ವಿರುದ್ಧ ಇಸ್ರೇಲ್‌ ಪ್ರತಿದಾಳಿ ಆರಂಭಿಸಿದರೆ ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯು ಇನ್ನಷ್ಟು ಪ್ರಕ್ಷುಬ್ಧಗೊಳ್ಳುವ ಅಪಾಯ ಇದೆ. ಇರಾನ್ ಜೊತೆ ಸಂಘರ್ಷವನ್ನು ತಾನು ಬಯಸುವುದಿಲ್ಲ ಎಂದು ಅಮೆರಿಕ ಹೇಳಿದೆ. ಆದರೆ ಇಸ್ರೇಲ್‌ನ ರಕ್ಷಣೆಗೆ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ADVERTISEMENT

‘ಇರಾನ್‌ ನಡೆಸಿದ ನಿರ್ಲಜ್ಜ ದಾಳಿಗೆ ಒಗ್ಗಟ್ಟಿನ ರಾಜತಾಂತ್ರಿಕ ಪ್ರತಿಕ್ರಿಯೆಯ ಬಗ್ಗೆ ಚರ್ಚಿಸಲು ಮುಂದುವರಿದ ಪ್ರಜಾತಂತ್ರ ರಾಷ್ಟ್ರಗಳ (ಜಿ7) ಸಭೆಯನ್ನು ಕರೆಯಲಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಇರಾನ್ ನಡೆಸಿರುವ ದಾಳಿಯು ವಿಸ್ತೃತ ಸೇನಾ ಸಂಘರ್ಷಕ್ಕೆ ನಾಂದಿಯಾಗುವುದು ತಮಗೆ ಇಷ್ಟವಿಲ್ಲ ಎಂಬ ಇಂಗಿತವು ಅವರ ಮಾತಿನಲ್ಲಿದೆ.

ಸಂಯಮ ಪ್ರದರ್ಶಿಸಬೇಕು ಎಂದು ರಷ್ಯಾ, ಫ್ರಾನ್ಸ್, ಚೀನಾ, ಈಜಿಪ್ಟ್, ಕತಾರ್ ಮತ್ತು ಯುಎಇ ಕಿವಿಮಾತು ಹೇಳಿವೆ.

ಭಾನುವಾರ ಬೆಳಿಗ್ಗೆ ಹೊತ್ತಿಗೆ (ಭಾರತೀಯ ಕಾಲಮಾನ) ದಾಳಿ ಪೂರ್ಣಗೊಂಡಿರುವುದಾಗಿ ಇರಾನ್ ಹೇಳಿದೆ. ಇಸ್ರೇಲ್‌ ತನ್ನ ವಾಯುಪ್ರದೇಶವನ್ನು ವಿಮಾನ ಸಂಚಾರಕ್ಕೆ ಮುಕ್ತವಾಗಿಸಿದೆ.

ಇರಾನ್ ಮತ್ತು ಇಸ್ರೇಲ್ ಹಲವು ವರ್ಷಗಳಿಂದ ಛಾಯಾ ಸಮರದಲ್ಲಿ ತೊಡಗಿವೆ. 1979ರ ‘ಇಸ್ಲಾಮಿಕ್ ಕ್ರಾಂತಿ’ಯ ಕಾಲದಿಂದಲೂ ಎರಡೂ ದೇಶಗಳ ನಡುವೆ ಶತ್ರುತ್ವ ಇದೆ. ಆದರೆ ಇರಾನ್‌ ಕಡೆಯಿಂದ ನೇರ ದಾಳಿ ಆಗಿರುವುದು ಇದೇ ಮೊದಲು.

ಇಸ್ರೇಲ್ ದೇಶವು ಅಮೆರಿಕದ ನೆರವು ಪಡೆದು ಬಹು ಹಂತಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರೂಪಿಸಿದೆ. ಈ ವ್ಯವಸ್ಥೆಯು ದೂರ ವ್ಯಾಪ್ತಿಯ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಕಿರು ವ್ಯಾಪ್ತಿಯ ರಾಕೆಟ್‌ಗಳನ್ನು ಆಗಸದಲ್ಲಿಯೇ ಹೊಡೆದುಹಾಕಬಲ್ಲದು. ಇಸ್ರೇಲ್ ರೂಪಿಸಿರುವ ಈ ವ್ಯವಸ್ಥೆಯು ಅಮೆರಿಕ ಮತ್ತು ಬ್ರಿಟನ್‌ನ ನೆರವಿನಿಂದ ಇರಾನ್‌ನ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ಸು ಕಂಡಿದೆ.

ಇರಾನ್‌ ದಾಳಿಗೆ ಇಸ್ರೇಲ್‌ ಪ್ರತಿದಾಳಿ ನಡೆಸಲಿದೆಯೇ ಎಂಬ ಪ್ರಶ್ನೆಗೆ ಇಸ್ರೇಲ್ ಸೇನೆಯ ವಕ್ತಾರ ಡೇನಿಯಲ್ ಹಗರಿ ಅವರು ‘ನಮ್ಮ ಪ್ರಜೆಗಳನ್ನು ರಕ್ಷಿಸಲು ಏನು ಅಗತ್ಯವೋ ಅದನ್ನು ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಇಸ್ರೇಲ್‌ನ ವಾಯುನೆಲೆಯೊಂದಕ್ಕೆ ಸಣ್ಣಪುಟ್ಟ ಹಾನಿ ಆಗಿದೆ. ಆದರೆ, ವಾಯುನೆಲೆಯು ಕಾರ್ಯಾಚರಿಸುತ್ತಿದೆ ಎಂದು ಹಗರಿ ಹೇಳಿದ್ದಾರೆ. ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಏಳು ವರ್ಷ ವಯಸ್ಸಿನ ಬಾಲಕಿಯೊಬ್ಬಳಿಗೆ ಗಾಯಗಳಾಗಿವೆ. ಆದರೆ, ಗಾಯಗಳಾಗಿದ್ದು ಕ್ಷಿಪಣಿ ದಾಳಿಯಿಂದಲೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇಸ್ರೇಲ್‌ನಲ್ಲಿ ಶಾಲೆಗಳು ಮುಚ್ಚಿವೆ.

ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹುಸೇನ್ ಬಘೇರಿ ಅವರು ಹೇಳಿರುವುದಾಗಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಮೆರಿಕಕ್ಕೆ ಇರಾನ್ ಎಚ್ಚರಿಕೆ: ಅಮೆರಿಕಕ್ಕೆ ಎಚ್ಚರಿಕೆ ನೀಡಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್‌, ‘ಇರಾನ್‌ನ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಕೆಲಸದಲ್ಲಿ ಭಾಗಿಯಾದರೆ, ಅಂತಹ ಕೆಲಸಕ್ಕೆ ಬೆಂಬಲ ನೀಡಿದರೆ ಇರಾನ್‌ನ ಸಶಸ್ತ್ರ ಪಡೆಗಳಿಂದ ನಿರ್ಣಾಯಕ ಪ್ರತಿಕ್ರಿಯೆ ಇರುತ್ತದೆ ಎಂದು ಭಯೋತ್ಪಾದಕ ಅಮೆರಿಕದ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ. ಅಮೆರಿಕವು ತನ್ನ ನಡೆಗೆ ವಿಷಾದಪಡಬೇಕಾಗುತ್ತದೆ’ ಎಂದು ಹೇಳಿದೆ.

ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಪ್ರತಿದಾಳಿ ನಡೆಸಿದರೆ ‘ಇನ್ನೂ ದೊಡ್ಡ ಮಟ್ಟದ ಪ್ರತಿಕ್ರಿಯೆ ಇರುತ್ತದೆ’ ಎಂದು ಇರಾನ್, ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.