ಕೈರೊ/ ಬೈರೂತ್: ಇಸ್ರೇಲ್, ಹಮಾಸ್ ಹಾಗೂ ಹಿಜ್ಬುಲ್ಲಾ ಬಂಡುಕೋರ ಸಂಘಟನೆಗಳ ನಡುವಿನ ಕದನ ವಿರಾಮ ಸಾಧ್ಯತೆಗಳು ದೂರವಾಗಿದೆ. ಶುಕ್ರವಾರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಕನಿಷ್ಠ 64 ಮಂದಿ ಮೃತಪಟ್ಟಿದ್ದಾರೆ. ಅತ್ತ ಲೆಬನಾನ್‌ನ ಬೈರೂತ್‌ನ ಮೇಲೂ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.
ಕೇಂದ್ರ ಗಾಜಾದ ದೇರ್-ಅಲ್ ಬಲಾಹ್, ನುಸೈರತ್ ಕ್ಯಾಂಪ್, ಅಲ್-ಜವಾಲಿಯಾ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 64 ಮಂದಿ ಸಾವಿಗೀಡಾಗಿ, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ವೈದ್ಯರು ತಿಳಿಸಿದ್ದಾರೆ.
ನಿರಾಶ್ರಿತರು ಇದ್ದ ನುಸೈರತ್ ಕ್ಯಾಂಪ್‌ನಲ್ಲಿರುವ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್-ಅದ್ವಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಹಾಗೂ ಉತ್ತರ ಗಾಜಾದಲ್ಲಿರುವ ಶಸ್ತ್ರಸಜ್ಜಿತ ಉಗ್ರರ ಗುಂಪನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ಇಸ್ರೇಲ್ ಸಮರ್ಥನೆ ನೀಡಿದೆ. ಆದರೆ ಶಾಲೆ ಮೇಲಿನ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಉತ್ತರ ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗಿದೆ' ಎಂದು ಅಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ಏಜೆನ್ಸಿಗಳ ಮುಖ್ಯಸ್ಥರು ಹೇಳಿದ್ದಾರೆ. ಇಡೀ ಪ್ಯಾಲೆಸ್ಟೀನಿಯನ್ನರು ಅಪಾಯದಲ್ಲಿದ್ದು, ರೋಗ, ಕ್ಷಾಮ ಹಾಗೂ ಹಿಂಸೆಯಿಂದ ಸಾವಿಗೀಡಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
'ಖಾನ್ ಯೂನಿಸ್‌ನಲ್ಲಿ ಶುಕ್ರವಾರ ನಡೆಸಿದ ವಾಯುದಾಳಿಯಲ್ಲಿ ಉನ್ನತ ಶ್ರೇಣಿಯಲ್ಲಿರುವ ಹಮಾಸ್‌ನ ಕೊನೆಯ ನಾಯಕ, ಗಾಜಾದಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದ ಇಝ್ಝ ಅಲ್-ದೀನ್ ಕಸಬ್‌ನನ್ನು ಕೊಂದು ಹಾಕಲಾಗಿದೆ' ಎಂದು ಇಸ್ರೇಲ್ ಸೇನೆ ಶುಕ್ರವಾರ ಸಂಜೆ ಹೇಳಿದೆ.
ಲೆಬನಾನ್‌ನ ಬೈರೂತ್ ಮೇಲೆಯೂ ಇಸ್ರೇಲ್ ಆಕ್ರಮಣ ಮುಂದುವರಿದಿದ್ದು, ಯುದ್ಧ ವಿರಾಮದ ಭರವಸೆಗಳು ಮರೀಚಿಕೆಯಾಗಿವೆ. ಬೈರೂತ್‌ನ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಕನಿಷ್ಠ 10 ದಾಳಿ ನಡೆಸಿದೆ. ಹೆಚ್ಚು ಜನಸಾಂದ್ರತೆ ಇರುವ ಪ್ರದೇಶದ ಮೇಲೆಯೇ ಈ ದಾಳಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.