ಜೆರುಸಲೇಂ: ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆದ ಮರುದಿನವೇ, ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿರುವ ಹಿಜ್ಬುಲ್ಲಾದ ‘ಕಮಾಂಡ್ ಸೆಂಟರ್’ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳಿದೆ. ಇದೇ ವೇಳೆ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ 73 ಮಂದಿ ಸಾವಿಗೀಡಾಗಿದ್ದಾರೆ.
ಹರೆತ್ ರೈಕ್‌ನ ಮಸೀದಿ ಹಾಗೂ ಆಸ್ಪತ್ರೆ ಸಮೀಪ ಇರುವ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು
ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆ ‘ನ್ಯಾಷನಲ್ ನ್ಯೂಸ್ ಏಜೆನ್ಸಿ’ ತಿಳಿಸಿದೆ.
ಆದರೆ ಬೈರೂತ್ ನಗರದಲ್ಲಿರುವ ಹಿಜ್ಬುಲ್ಲಾದ ಕಮಾಂಡ್ ಸೆಂಟರ್, ಗುಪ್ತಚರ ಪ್ರಧಾನ ಕಚೇರಿ ಹಾಗೂ ನೆಲಮಹಡಿಯಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಾಲಯದ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ದಾಳಿಯಲ್ಲಿ ಮೂವರು ಹಿಜ್ಬುಲ್ಲಾ ಬಂಡುಕೋರರೂ ಸಾವಿಗೀಡಾಗಿದ್ದಾಗಿ ಇಸ್ರೇಲ್ ತಿಳಿಸಿದೆ.
ಇದೇ ವೇಳೆ ಪ್ಯಾಲೆಸ್ಟೀನ್‌ನ ಉತ್ತರ ಭಾಗದಲ್ಲಿರುವ ಬೈತ್ ಲಹಿಯಾದ ಮೇಲೆ ಇಸ್ರೇಲ್ ಪಡೆಗಳ ಆಕ್ರಮಣದಿಂದ 73 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.
ಬೈತ್ ಲಹಿಯಾ ಜನವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುಪಡೆಗಳು ದಾಳಿ ನಡೆಸಿದ್ದು, 73 ಹುತಾತ್ಮರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಗಾಯಗೊಂಡಿದ್ದಾರೆ ಎಂದು ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮೂದ್ ಬಾಸೆಲ್ ಹೇಳಿದ್ದಾರೆ.
ಜನವಸತಿ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ ಎನ್ನುವುದನ್ನು ತಳ್ಳಿ ಹಾಕಿರುವ ಇಸ್ರೇಲಿ ಪಡೆಗಳು, ‘ಹಮಾಸ್ ಉಗ್ರರ ನೆಲೆ’ಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದೆ. ಅಲ್ಲದೆ ರಕ್ಷಣಾ ಏಜೆನ್ಸಿ ನೀಡಿರುವ ಅಂಕಿ ಅಂಶವನ್ನು ತಳ್ಳಿ ಹಾಕಿವೆ.
ಗಾಜಾ ಹಾಗೂ ಲೆಬನಾನ್‌ನಲ್ಲಿ ಸುಮಾರು 175 ಉಗ್ರರ ತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಗಾಜಾದ ಉತ್ತರ, ಕೇಂದ್ರ ಹಾಗೂ ದಕ್ಷಿಣ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಸ್ರೇಲ್ ಪಡೆಗಳು ತಿಳಿಸಿವೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.