ADVERTISEMENT

Israel-Hamas War |ಗುರಿ ಈಡೇರಿದೆ, ಕದನವಿರಾಮಕ್ಕಿದು ಸಕಾಲ: ಅಮೆರಿಕ

ಏಜೆನ್ಸೀಸ್
Published 23 ಅಕ್ಟೋಬರ್ 2024, 15:13 IST
Last Updated 23 ಅಕ್ಟೋಬರ್ 2024, 15:13 IST
<div class="paragraphs"><p>ಗಾಜಾ ಪಟ್ಟಿಯ ದಕ್ಷಿಣ ಭಾಗದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಎದ್ದ ಹೊಗೆ</p></div>

ಗಾಜಾ ಪಟ್ಟಿಯ ದಕ್ಷಿಣ ಭಾಗದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಎದ್ದ ಹೊಗೆ

   

ರಾಯಿಟರ್ಸ್ ಚಿತ್ರ

ಟೆಲ್‌ ಅವೀವ್: ‘ಹಮಾಸ್ ವಿರುದ್ಧದ ಕೌಶಲಯುಕ್ತ ಗೆಲುವನ್ನು ಇಸ್ರೇಲ್ ಕಾರ್ಯತಂತ್ರದ ಯಶಸ್ಸನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಇದಕ್ಕಾಗಿ ಗಾಜಾದಲ್ಲಿ ಯುದ್ಧ ಕೊನೆಗಾಣಿಸುವ ಒಪ್ಪಂದ‌ಕ್ಕೆ ಬರಬೇಕು’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.

ADVERTISEMENT

ಗಾಜಾಪಟ್ಟಿಯಲ್ಲಿ ಯುದ್ಧ ಆರಂಭವಾದ ಬಳಿಕ ಈ ವಲಯಕ್ಕೆ 11ನೇ ಬಾರಿಗೆ ಭೇಟಿ ನೀಡಿದ ಅವರು ಬುಧವಾರ ಇಸ್ರೇಲ್‌ನಿಂದ ಸೌದಿ ಅರೇಬಿಯಾಗೆ ತೆರಳುವ ಮುನ್ನ ಇಲ್ಲಿ ಸುದ್ದಿಗಾರರ ಜೊತೆಗೆ ಮತನಾಡಿದರು.

ಬ್ಲಿಂಕನ್‌ ನಿರ್ಗಮನದ ಹಿಂದೆಯೇ ವಾಯುದಾಳಿಯ ಎಚ್ಚರಿಕೆಯ ಸೈರನ್ ಮೊಳಗಿತು. ಹಿಂದೆಯೇ ಇಸ್ರೇಲ್‌ ಸೇನೆಯು ಲೆಬನಾನ್‌ ಅನ್ನು ಗುರಿಯಾಗಿಸಿ ವಾಯುದಾಳಿಯನ್ನು ಆರಂಭಿಸಿತು. ದಾಳಿಯ ಸೂಚನೆಯಾಗಿ ದಟ್ಟ ಹೊಗೆಯು ವಾತಾವರಣವನ್ನು ಆವರಿಸಿತು. 

ಕಾಣದ ಕದನ ವಿರಾಮ ಸಾಧ್ಯತೆ:

ಹಮಾಸ್‌ ನಾಯಕ ಯಹ್ಯಾ ಸಿನ್ವರ್ ಹತ್ಯೆಯ ನಂತರವೂ ಗಾಜಾದಲ್ಲಿ ಕದನವಿರಾಮ ಘೋಷಣೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಬ್ಲಿಂಕನ್ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇತರೆ ಅಧಿಕಾರಿಗಳನ್ನು ಭೇಟಿಯಾದ ಬಳಿಕವೂ ಸಕಾರಾತ್ಮಕ ಬೆಳವಣಿಗೆಗಳಾಗಿಲ್ಲ.

ಸಿನ್ವರ್ ಹೊಂದಿದ್ದ ಕಠಿಣ ನಿಲುವು ಮಾತುಕತೆ ವಿಫಲವಾಗಲು ಕಾರಣ ಎಂಬುದು ಇಸ್ರೇಲ್‌ ಆರೋಪ. ಆದರೆ, ಹಮಾಸ್‌ ಪ‍್ರಕಾರ ಇಸ್ರೇಲ್‌ ಸೇನೆಯ ಪೂರ್ಣ ವಾಪಸಾತಿ, ದೊಡ್ಡ ಸಂಖ್ಯೆಯಲ್ಲಿರುವ ಪ್ಯಾಲೆಸ್ಟೀನ್ ಕೈದಿಗಳ ಬಿಡುಗಡೆ ಬೇಡಿಕೆಗೆ ಸ್ಪಂದನ ದೊರೆತಿಲ್ಲ.

ನಸ್ರಲ್ಲಾ ಉತ್ತರಾಧಿಕಾರಿಯ ಹತ್ಯೆ–ಇಸ್ರೇಲ್

ಪ್ರತಿಪಾದನೆ ಬೈರೂತ್: ‘ಹಿಜ್ಬುಲ್ಲಾ ಸಂಘಟನೆಯ ಮುಂದಿನ ನಾಯಕ ಎಂದು ಭಾವಿಸಲಾಗಿದ್ದ ಅಧಿಕಾರಿ ಹಶೇಮ್‌ ಸಫೀದ್ದೀನ್‌ನನ್ನು ಈ ತಿಂಗಳಾರಂಭದಲ್ಲೇ ಹತ್ಯೆ ಮಾಡಲಾಗಿದೆ’ ಎಂದು ಇಸ್ರೇಲ್‌ ಸೇನೆ ಮಂಗಳವಾರ ಇಲ್ಲಿ ಹೇಳಿದೆ. ಹಸನ್‌ ನಸ್ರಲ್ಲಾ ಉತ್ತರಾಧಿಕಾರಿಯಾಗಿ ಈತ ಹಿಜ್ಬುಲ್ಲಾ ಸಂಘಟನೆ ಮುನ್ನಡೆಸುವರು ಎಂದು ಹೇಳಲಾಗಿತ್ತು.

ಹತ್ಯೆ ವಿಷಯದಲ್ಲಿ ಇಸ್ರೇಲ್‌ ಪ್ರತಿಪಾದನೆ ಕುರಿತು ಹಿಜ್ಬುಲ್ಲಾ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಕ್ಟೋಬರ್‌ ಆರಂಭದಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ನಡೆಸಿದ್ದ ದಾಳಿಯಲ್ಲಿ ಸಫೀದ್ದೀನ್‌ ಹಾಗೂ ಹಿಜ್ಬುಲ್ಲಾದ ಇತರೆ 25 ನಾಯಕರು ಸತ್ತಿದ್ದರು ಎಂದು ಇಸ್ರೇಲ್‌ ಸೇನೆಯು ಹೇಳಿದೆ. 

ಆಸ್ಪತ್ರೆ ಮೇಲೆ ದಾಳಿ 18 ಬಲಿ

ಮಂಗಳವಾರ ಇಸ್ರೇಲ್‌ ಸೇನೆಯು ಬೈರೂತ್ ನಗರದಲ್ಲಿನ ಅತಿ ದೊಡ್ಡ ಸಾರ್ವಜನಿಕ ಆಸ್ಪತ್ರೆ ಗುರಿಯಾಗಿಸಿ ವಾಯುದಾಳಿ ನಡೆಸಿದ್ದು 18 ಜನರು ಸತ್ತಿದ್ದರೆ 60 ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಹಲವು ಕಟ್ಟಡಗಳು ಜಖಂಗೊಂಡಿವೆ.

ಹಿಜ್ಬುಲ್ಲಾ ಗುರಿಯಾಗಿಸಿ ದಾಳಿ ನಡೆಸಿದ್ದು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ. ಇಲ್ಲಿನ ರಫೀಕ್‌ ಹರಿರಿ ಯೂನಿವರ್ಸಿಟಿ ಆಸ್ಪತ್ರೆಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳು ದಾಳಿ ನಡೆದಿರುವುದನ್ನು ಕಂಡಿದ್ದಾರೆ.  ಸಹೆಲ್ ಆಸ್ಪತ್ರೆ ನೆಲಮಾಳಿಗೆಯಲ್ಲಿ ಹಿಜ್ಬುಲ್ಲಾ ಅಗಾಧ ಪ್ರಮಾಣದಲ್ಲಿ ಡಾಲರ್ ಚಿನ್ನ ಬಚ್ಚಿಟ್ಟಿದೆ ಎಂದು ಇಸ್ರೇಲ್‌ ಆರೋಪಿಸಿದ್ದು ಇದರಿಂದ ಸಿಬ್ಬಂದಿಯಲ್ಲಿ ದಾಳಿ ಭೀತಿ ಎದುರಾಗಿದೆ. ಆಸ್ಪತ್ರೆಯ ನಿರ್ದೇಶಕರು ಡಾಲರ್ ಚಿನ್ನ ಇದೆ ಎನ್ನುವ ಆರೋಪವನ್ನು ನಿರಾಕರಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.