ADVERTISEMENT

ಗಾಜಾದಲ್ಲಿ ನಿಲ್ಲದ ಇಸ್ರೇಲ್ ದಾಳಿ: ಆಹಾರ ಸಿಗದೆ ಹಸಿವಿನಿಂದ ಜನ ಕಂಗಾಲು

ರಾಯಿಟರ್ಸ್
Published 9 ಅಕ್ಟೋಬರ್ 2024, 9:41 IST
Last Updated 9 ಅಕ್ಟೋಬರ್ 2024, 9:41 IST
<div class="paragraphs"><p>ಇಸ್ರೇಲ್ ಆಕ್ರಮಣದಿಂದ ಸಾವಿಗೀಡಾದ ಕುಟುಂಬಸ್ಥರ ಸಾವಿಗೆ ರೋದಿಸುತ್ತರುವ ಬಾಲಕ</p></div>

ಇಸ್ರೇಲ್ ಆಕ್ರಮಣದಿಂದ ಸಾವಿಗೀಡಾದ ಕುಟುಂಬಸ್ಥರ ಸಾವಿಗೆ ರೋದಿಸುತ್ತರುವ ಬಾಲಕ

   

–ರಾಯಿಟರ್ಸ್ ಚಿತ್ರ

ಕೈರೊ: ಗಾಜಾದ ಮೇಲೆ ಇಸ್ರೇಲ್ ನಡೆಸಿದ ತಡರಾತ್ರಿ ದಾಳಿಯಲ್ಲಿ ಕನಿಷ್ಠ 18 ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಕೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಲ್ಲದೆ ದಕ್ಷಿಣ ಭಾಗದಲ್ಲಿ ಇರುವ ಜಬಾಲಿಯಾದ ನಿರಾಶ್ರಿತರ ಕೇಂದ್ರದ ಮೇಲೂ ಇಸ್ರೇಲ್ ಪಡೆಗಳ ದಾಳಿ ಮುಂದುವರಿದಿದೆ.|

ADVERTISEMENT

ಗಾಜಾದ ಉಪನಗರ ಶೆಜಾಯಾದಲ್ಲಿ ನಡೆಸಿದ ಆಕ್ರಮಣದಲ್ಲಿ ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿದ್ದಾರೆ. ಗಾಜಾಪಟ್ಟಿಯ ಕೇಂದ್ರ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ 9 ಮಂದಿ ಅಸುನೀಗಿದ್ದಾರೆ.

ಹಮಾಸ್‌ ಬಂಡುಕೋರರು ಜಬಾಲಿಯಾದಿಂದ ದಾಳಿ ನಡೆಸುವುದನ್ನು ಹಾಗೂ ಒಟ್ಟುಗೂಡುವುದನ್ನು ತಡೆಯಲು ಸತತ ಐದನೇ ದಿನವೂ ಅಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಜಬಾಲಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಖಾಲಿ ಮಾಡುವಂತೆ ಇಸ್ರೇಲ್ ಸೇನೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ ಸುರಕ್ಷಿತವಾಗಿ ಸ್ಥಳಾಂತರಗೊಳ್ಳಲು ಗಾಜಾ ಪಟ್ಟಿಯಲ್ಲಿ ಬೇರೆ ಯಾವುದೇ ಸ್ಥಳಗಳಿಲ್ಲ ಎಂದು ಪ್ಯಾಲೆಸ್ಟೀನ್ ಹಾಗೂ ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಇಸ್ರೇಲ್ ದಾಳಿಯಿಂದಾಗಿ ಜಬಾಲಿಯಾ ಹಾಗೂ ದಕ್ಷಿಣ ಗಾಜಾದಲ್ಲಿ ಡಜನ್‌ಗೂ ಅಧಿಕ ನಾಗರಿಕರು ಸಾವಿಗೀಡಾಗಿದ್ದಾಗಿ ಗೊತ್ತಾಗಿದೆ. ಆದರೆ ಇಸ್ರೇಲ್ ಬಾಂಬ್ ದಾಳಿಯಿಂದಾಗಿ ಅಲ್ಲಿಗೆ ತೆರೆಳಲು ಸಾಧ್ಯವಾಗುತ್ತಿಲ್ಲ’ ಎಂದು ಪ್ಯಾಲೆಸ್ಟೀನ್‌ ನಾಗರಿಕ ತುರ್ತು ಸೇವೆ ಹೇಳಿದೆ.

ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್ ನಿರಾಶ್ರಿತರ ಏಜೆನ್ಸಿಯ ಆಶ್ರಯ ಕೇಂದ್ರಗಳು ಹಾಗೂ ಸೇವೆಗಳು ಮೂಲಭೂತ ಸೌಕರ್ಯ ಇಲ್ಲದ ಕಾರಣಕ್ಕೆ ಮುಚ್ಚಬೇಕಾಗಿ ಬಂದಿದೆ. ದಕ್ಷಿಣ ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ಪ್ರಮಾಣ ಹೆಚ್ಚಳವಾಗಿದೆ.
ಫಿಲಿಪ್ ಲಜ್ಜಾರಿನಿ, ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್ ನಿರಾಶ್ರಿತರ ಏಜೆನ್ಸಿಯ ಮುಖ್ಯಸ್ಥ

‘ಆ ಪ್ರದೇಶದಲ್ಲಿ ಕನಿಷ್ಠ 4 ಲಕ್ಷ ಜನ ಸಿಲುಕಿ ಹಾಕಿಕೊಂಡಿದ್ದಾರೆ’ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್ ನಿರಾಶ್ರಿತರ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ ಲಜ್ಜಾರಿನಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸ್ಥಳ ತೊರೆಯಬೇಕು ಎಂದು ಇಸ್ರೇಲ್ ಪಡೆಗಳು ನೀಡಿರುವ ಎಚ್ಚರಿಕೆಯು ಜನರನ್ನು, ಅದರಲ್ಲೂ ಜಬಾಲಿಯಾ ಕ್ಯಾಂಪ್‌ನಲ್ಲಿರುವ ನಿರಾಶ್ರಿತರನ್ನು ಪದೇ ಪದೇ ಪಲಾಯನ ಮಾಡುವಂತೆ ಒತ್ತಾಯಿಸುತ್ತಿವೆ. ಗಾಜಾದಲ್ಲಿ ಸುರಕ್ಷಿತವಾದ ಬೇರೆ ಸ್ಥಳ ಇಲ್ಲ ಎಂದು ಜನರು ಎಲ್ಲಿಗೂ ಹೋಗುತ್ತಿಲ್ಲ’ ಎಂದು ಹೇಳಿದ್ದಾರೆ.

ಇಸ್ರೇಲ್‌ನ ಇತ್ತೀಚಿನ ದಾಳಿಯು ಕ್ಯಾಂಪ್‌ನಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಪೋಲಿಯೊ ಲಸಿಕೆ ಅಭಿಯಾನದ ಮೇಲೂ ಪರಿಣಾಮ ಬೀರಿದೆ ಎಂದಿದ್ದಾರೆ.

‌‌ಲಜ್ಜಾರಿನಿ ಅವರ ಹೇಳಿಕೆ ಬಗ್ಗೆ ಇಸ್ರೇಲ್‌ನಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.