ADVERTISEMENT

Israel-Iran Conflict: ಇರಾನ್‌ ಸೇನಾ ನೆಲೆಗಳತ್ತ ದಾಳಿ, ಇಬ್ಬರು ಸಾವು

ಏಜೆನ್ಸೀಸ್
Published 26 ಅಕ್ಟೋಬರ್ 2024, 14:29 IST
Last Updated 26 ಅಕ್ಟೋಬರ್ 2024, 14:29 IST
<div class="paragraphs"><p>ಇಸ್ರೇಲ್ ದಾಳಿಯಿಂದಾಗಿ ದಕ್ಷಿಣ ಲೆಬನಾನ್‌ನಲ್ಲಿ ಎದ್ದಿರುವ ಹೊಗೆ</p></div>

ಇಸ್ರೇಲ್ ದಾಳಿಯಿಂದಾಗಿ ದಕ್ಷಿಣ ಲೆಬನಾನ್‌ನಲ್ಲಿ ಎದ್ದಿರುವ ಹೊಗೆ

   

–ರಾಯಿಟರ್ಸ್ ಚಿತ್ರ

ಟೆಹ್ರಾನ್: ಇರಾನ್‌ನ ಸೇನಾ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್‌ ಸೇನೆ ಶನಿವಾರ ತೀವ್ರ ದಾಳಿ ನಡೆಸಿದೆ. ಕನಿಷ್ಠ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ADVERTISEMENT

‘ಪ್ರತಿದಾಳಿ ನಡೆಸಿದರೆ ಅದಕ್ಕೆ ತಕ್ಕ ಬೆಲೆತೆರಬೇಕಾದಿತು’ ಎಂದು ಇಸ್ರೇಲ್‌ ಎಚ್ಚರಿಸಿದೆ. ಇನ್ನೊಂದೆಡೆ, ಅಮೆರಿಕ ಮತ್ತು ಬ್ರಿಟನ್‌ ರಾಷ್ಟ್ರಗಳು ‘ದಾಳಿ ಮುಂದುವರಿಸುವ ಮೂಲಕ ಇನ್ನಷ್ಟು ಬಿಕ್ಕಟ್ಟಿಗೆ ಕಾರಣವಾಗಬಾರದು‘ ಎಂದು ಇರಾನ್‌ಗೆ ಒತ್ತಾಯಿಸಿವೆ.

‘ನನ್ನನ್ನು ರಕ್ಷಿಸಿಕೊಳ್ಳುವುದು ಹಕ್ಕು ಮತ್ತು ಕರ್ತವ್ಯ’ ಎಂದು ಇರಾನ್‌ ಈ ದಾಳಿಗೆ ಕಟುವಾಗಿ ಪ್ರತಿಕ್ರಿಯಿಸಿದೆ. ಇರಾನ್‌ಗೆ ಬೆಂಬಲವಾಗಿರುವ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯು, ಇಸ್ರೇಲ್‌ನ ಸೇನಾ ನೆಲೆ ಮತ್ತು ಗುಪ್ತದಳ ನೆಲೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಇರಾನ್‌ನಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿಸಿ ಕೈಗೊಂಡಿದ್ದ ವಾಯುದಾಳಿಯು ಪೂರ್ಣಗೊಂಡಿದೆ ಎಂದು ಇದೇ ವೇಳೆ ಇಸ್ರೇಲ್‌ ಪ್ರಕಟಿಸಿದೆ. ‘ನಿರ್ದಿಷ್ಟ ಗುರಿಯಲ್ಲಿ ದಾಳಿ ನಡೆಸಿ ದೇಶದ ಯುದ್ಧ ವಿಮಾನಗಳು ಸುರಕ್ಷಿತವಾಗಿ ಮರಳಿವೆ’ ಎಂದು ತಿಳಿಸಿದೆ.

ಯುದ್ಧ ವಿಮಾನಗಳು ಇರಾನ್‌ನಲ್ಲಿ ಕ್ಷಿಪಣಿ ತಯಾರಿಕಾ ಸ್ಥಾವರದ ಮೇಲೆ ದಾಳಿ ನಡೆಸಿದೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್‌ ಮೇಲೆ ಪ್ರಯೋಗಿಸಿದ್ದ ಕ್ಷಿಪಣಿಗಳನ್ನು ನಿರ್ದಿಷ್ಟ ಸ್ಥಾವರದಲ್ಲೇ ತಯಾರಿಸಲಾಗಿತ್ತು ಎಂದು ಇಸ್ರೇಲ್‌ ಸೇನೆಯು ವಿವರಿಸಿದೆ. 

ಈ ಕ್ಷಿಪಣಿಗಳ ದಾಳಿಯಿಂದ ಇಸ್ರೇಲ್‌ನ ಜನವಸತಿ ಪ್ರದೇಶದ ಮೇಲೆ ನೇರ ಮತ್ತು ತಕ್ಷಣದ ಪರಿಣಾಮ ಉಂಟು ಮಾಡುವಂತಿದ್ದವು ಎಂದು  ಸೇನೆಯು ತಿಳಿಸಿದೆ.

ಭೂಮಿಯಿಂದ ಆಗಸದಲ್ಲಿನ ನಿರ್ದಿಷ್ಟ ಗುರಿಯತ್ತ ಪ್ರಯೋಗಿಸಬಹುದಾದ ಕ್ಷಿಪಣಿಗಳು, ವಾಯುದಾಳಿಗೆ ಪೂರಕವಾಗಿದ್ದ ಇರಾನ್‌ನ ಯುದ್ಧ ಶಸ್ತ್ರಾಸ್ತ್ರಗಳ ನೆಲೆ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಆದರೆ, ದಾಳಿಯಿಂದ ಆಗಿರುವ ನಷ್ಟದ ಅಂದಾಜನ್ನು ಇಸ್ರೇಲ್‌ ನೀಡಿಲ್ಲ. ಅಲ್ಲದೆ, ಇರಾನ್‌ ದಾಳಿಯಿಂದ ತನ್ನ ಸೇನಾ ನೆಲೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂದೂ ಪ್ರತಿಪಾದಿಸಿದೆ.

ಮೂರು ಪ್ರಾಂತ್ಯದಲ್ಲಿ ದಾಳಿ, ಸೀಮಿತ ಹಾನಿ –ಇರಾನ್‌

ಇರಾನ್‌ನಲ್ಲಿ ಇಲಾಂ, ಖುಜೆಸ್ತಾನ್ ಮತ್ತು ಟೆಹ್ರಾನ್‌ ಪ್ರಾಂತ್ಯದಲ್ಲಿಇದ್ದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್‌ ಸೇನೆ ದಾಳಿ ನಡೆಸಿದ್ದು, ‘ಸೀಮಿತ ನಷ್ಟವಾಗಿದೆ’ ಎಂದು ಇರಾನ್ ಸೇನೆಯು ಪ್ರತಿಕ್ರಿಯಿಸಿದೆ.

ಈ ಕುರಿತು ಸೇನೆಯು ಹೇಳಿಕೆಯನ್ನು ಅಧಿಕೃತ ಟಿ.ವಿ. ಮಾಧ್ಯಮ ವರದಿ ಮಾಡಿದೆ. ದಾಳಿಯಿಂದ ಸೇನಾ ನೆಲೆಗಳ ಮೇಲೆ ಆಗಿರುವ ಹಾನಿಯ ಚಿತ್ರಗಳನ್ನೂ ಪ್ರಸಾರ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.