ADVERTISEMENT

ಇಸ್ರೇಲ್‌ನಿಂದ ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು ಹಾಗೂ ಕರ್ತವ್ಯ: ಇರಾನ್ ಎಚ್ಚರಿಕೆ

ಏಜೆನ್ಸೀಸ್
Published 27 ಅಕ್ಟೋಬರ್ 2024, 2:36 IST
Last Updated 27 ಅಕ್ಟೋಬರ್ 2024, 2:36 IST
<div class="paragraphs"><p>ಇಸ್ರೇಲ್ ಇರಾನ್ ಧ್ವಜ</p></div>

ಇಸ್ರೇಲ್ ಇರಾನ್ ಧ್ವಜ

   

– ರಾಯಿಟರ್ಸ್ ಚಿತ್ರ

ಟೆಹ್ರಾನ್‌: ಇಸ್ರೇಲ್ ದಾಳಿಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವುದಾಗಿ ಇರಾನ್ ಹೇಳಿದೆ. ಆ ಮೂಲಕ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸುವ ಸೂಚನೆಯನ್ನು ನೀಡಿದೆ. ಇದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಆತಂಕ ತಂದೊಡ್ಡಿದೆ.

ADVERTISEMENT

ಇರಾನ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ನಾಲ್ವರು ಸೈನಿಕರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತ್ಯುತ್ತರ ನೀಡುವ ಸುಳಿವನ್ನು ಇರಾನ್ ನೀಡಿದೆ.

ಇಸ್ರೇಲ್‌ನಿಂದ ರಕ್ಷಿಸಿಕೊಳ್ಳುವುದು ನಮ್ಮ ‘ಹಕ್ಕು ಹಾಗೂ ಕರ್ತವ್ಯ’ ಎಂದು ಇರಾನ್ ಹೇಳಿದೆ. ಈ ನಡುವೆ, ಉತ್ತರ ಇಸ್ರೇಲ್‌ನ ಜನವಸತಿ ಪ್ರದೇಶದ ಮೇಲೆ ದಾಳಿ ನಡೆಸಿರುವುದಾಗಿ ಲೆಬನಾನ್‌ನಲ್ಲಿರುವ ಇರಾನ್‌ ಬೆಂಬಲಿತ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ಹೇಳಿದೆ.

ಒಂದು ವೇಳೆ ತಿರುಗೇಟು ನೀಡಿದರೆ ‘ದುಬಾರಿ ಬಲೆ ತೆರಬೇಕಾದಿತು’ ಎಂದು ಇಸ್ರೇಲ್ ಕೂಡ ಎಚ್ಚರಿಕೆ ನೀಡಿದೆ. ಈ ಸಂಘರ್ಷವನ್ನು ವಿಸ್ತರಿಸಕೂಡದು ಎಂದು ಅಮೆರಿಕ, ಜರ್ಮನಿ ಹಾಗೂ ಬ್ರಿಟನ್‌, ಇರಾನ್‌ಗೆ ಒತ್ತಾಯಿಸಿದೆ.

‘ಇರಾನ್‌ನ ಸೇನಾ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ಹೀಗಾಗಿ ಇದು ಇಲ್ಲಿಗೆ ಕೊನೆಗೊಳ್ಳಲಿದೆ’ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತೈಲ ಹಾಗೂ ಅಣು ಸೌಲಭ್ಯದ ಮೇಲೆ ದಾಳಿ ಮಾಡಬಾರದು ಎಂದು ಇಸ್ರೇಲ್‌ಗೆ ಮನವಿ ಮಾಡಿದ್ದಾರೆ. ಆದರೆ ಅವುಗಳ ಮೇಲೆ ದಾಳಿ ನಡೆದಿಲ್ಲ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಖಚಿತಪಡಿಸಿದೆ.

‘ಅನಿಯಂತ್ರಿತ ಯುದ್ಧವನ್ನು’ ನಿಲ್ಲಿಸಬೇಕು ಎಂದು ಐರೋಪ್ಯ ಒಕ್ಕೂಟ ಉಭಯ ದೇಶಗಳಿಗೂ ಆಗ್ರಹಿಸಿದೆ. ಕುವೈತ್‌, ಸೌದಿ ಅರೇಬಿಯಾ ಹಾಗೂ ಇರಾನ್‌ನ ನೆರೆಹೊರೆಯ ರಾಷ್ಟ್ರಗಳು ಇಸ್ರೇಲ್‌ ನಡೆಯನ್ನು ಖಂಡಿಸಿವೆ.

ಈ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸೂಚನೆ ಲಭಿಸಿದೆ. ಸ್ಥಳದಿಂದ ತೆರವುಗೊಳ್ಳುವಂತೆ ಇಸ್ರೇಲ್‌ನ 12 ಗ್ರಾಮಗಳ ಜನರಿಗೆ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಂಥಹದ್ದೆ ಎಚ್ಚರಿಕೆಯನ್ನು ದಕ್ಷಿಣ ಬೈರೂತ್‌ನಲ್ಲಿ ಇಸ್ರೇಲ್‌ ನೀಡಿದೆ.

ಭಾನುವಾರ ಬೆಳಿಗ್ಗೆ ಬೈರೂತ್‌ನ ದಕ್ಷಿಣ ಉಪನಗರದ ಮೇಲೆ ಇಸ್ರೇಲ್‌ ದಾಳಿ ನಡೆಸಿದ್ದಾಗಿ ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.