ADVERTISEMENT

ಇರಾನ್‌ನ ಪ್ರಮುಖ ಇಂಧನ ಸೌಲಭ್ಯಗಳ ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದ ಇಸ್ರೇಲ್

ಏಜೆನ್ಸೀಸ್
Published 27 ಅಕ್ಟೋಬರ್ 2024, 4:44 IST
Last Updated 27 ಅಕ್ಟೋಬರ್ 2024, 4:44 IST
<div class="paragraphs"><p>ಇಸ್ರೇಲ್ ದಾಳಿ ನಡೆಸಿದ ಇರಾನ್‌ನ ಸ್ಥಳ</p></div>

ಇಸ್ರೇಲ್ ದಾಳಿ ನಡೆಸಿದ ಇರಾನ್‌ನ ಸ್ಥಳ

   

– ರಾಯಿಟರ್ಸ್ ಚಿತ್ರ

ಟೆಹ್ರಾನ್‌: ಇರಾನ್‌ ಮೇಲೆ ಶನಿವಾರ ಮುಂಜಾನೆ ಇಸ್ರೇಲ್ ನಡೆಸಿದ ದಾಳಿಯಲ್ಲಿ, ಪ್ರಮುಖ ತೈಲ, ಪೆಟ್ರೋಕೆಮಿಕಲ್ ಸಂಸ್ಕರಣಾ ಘಟಕಗಳು, ದೊಡ್ಡ ಅನಿಲ ಘಟಕಗಳ ಸಂರಕ್ಷಣಾ ವ್ಯವಸ್ಥೆ ಹಾಗೂ ದಕ್ಷಿಣ ಇರಾನ್‌ ಪ್ರಮುಖ ಬಂದರೊಂದನ್ನು ಗುರಿಯಾಗಿಸಿತ್ತು ಎಂದು ಉಭಯ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಹೇಳಿದ್ದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ADVERTISEMENT

ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ವಿಶಾಲವಾದ ಬಂದರ್‌ ಇಮಾಮ್ ಖೋಮಿನಿ ಪೆಟ್ರೋಕೆಮಿಕಲ್ ಸಂಕೀರ್ಣ, ಅಬದಾನ್‌ ತೈಲ ಸಂಸ್ಕರಣ ಘಟಕ, ಇಲ್ಲಾಮ್ ಪ್ರಾಂತ್ಯದ ವಾಯು ರಕ್ಷಣಾ ವ್ಯವಸ್ಥೆ, ಟಂಗೆ ಬಿಜಾರ್‌ ಅನಿಲ ಘಟಕದ ಮೇಲೆ ದಾಳಿ ನಡೆದಿದೆ ಎಂದು ಇರಾನ್‌ನ ಇಂಧನ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದು ಗುಪ್ತಚರ ವಿಷಯವಾಗಿರುವುದರಿಂದ, ಉಭಯ ದೇಶದ ಅಧಿಕಾರಿಗಳು ತಮ್ಮ ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಪ್ರತೀಕಾರ ಹೀಗೆ ಮುಂದುವರಿದರೆ, ಇಂಧನ ಮತ್ತು ಆರ್ಥಿಕ ಕೇಂದ್ರಗಳು ಭವಿಷ್ಯದಲ್ಲಿ ದಾಳಿಗೆ ಗುರಿಯಾಗಬಹುದು. ಹೀಗಾಗಿ ವಾಯು ರಕ್ಷಣಾ ವ್ಯವಸ್ಥೆ ಮೇಲೆ ಇಸ್ರೇಲ್ ನಡೆಸಿರುವ ದಾಳಿ, ಇರಾನ್‌ಲ್ಲಿ ಭಾರಿ ಎಚ್ಚರಿಕೆ ಮೂಡಿಸಿದೆ ಎಂದು ಇರಾನ್‌ನ ಮೂವರು ಅಧಿಕಾರಿಗಳು ಹೇಳಿದ್ದಾರೆ.

‘ಇಸ್ರೇಲ್ ನಮಗೆ ಸ್ಪಷ್ಟ ಸಂದೇಶ ರವಾನಿಸುತ್ತಿದೆ. ಇದು ಇರಾನ್‌ಗೆ ಗಂಭೀರ ಆರ್ಥಿಕ ಸಮಸ್ಯೆಗಳನ್ನು ತಂದೊಡ್ಡಲಿದೆ. ಈಗ ನಾವು ಇದನ್ನು ಮುಂದುವರಿಸದೆ ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಇರಾನ್‌ ತೈಲ ಹಾಗೂ ಅನಿಲ ಕಾರ್ಖಾನೆಯ ತಜ್ಞ ಹಮೀಸ್ ಹುಸೇನಿ ಹೇಳಿದ್ದಾರೆ.

ದಾಳಿಯಿಂದಾಗಿ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಯೋಧರು ಸಾವಿಗೀಡಾಗಿದ್ದಾರೆ. ಸಾವು ನೋವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಇರಾನ್ ಪಡೆಗಳು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇರಾನ್‌ನ ಇಂಧನ ಕೈಗಾರಿಕೆ ಮತ್ತು ಪರಮಾಣು ಯೋಜನೆ ಮೇಲೆ ದಾಳಿ ನಡೆಸಲು ಉದ್ದೇಶಿಸಿತ್ತು.

ಆದರೆ ಇರಾನ್‌ನ ಯಾವುದೇ ಇಂಧನ ಮತ್ತು ತೈಲ ಸ್ಥಾವರ ಅಥವಾ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದಂತೆ ಅಮೆರಿಕ ಇಸ್ರೇಲ್‌ಗೆ ಒತ್ತಾಯಿಸಿತು. ಅಂತಹ ಬೆಲೆಬಾಳುವ ತಾಣಗಳ ಮೇಲಿನ ದಾಳಿಯು ಇರಾನ್‌ನ ಪ್ರತಿಕ್ರಿಯೆಯನ್ನು ಹೆಚ್ಚಿಸಬಹುದು. ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸಬಹುದು ಮತ್ತು ಸಂಪೂರ್ಣ ಪ್ರಾದೇಶಿಕ ಯುದ್ಧಕ್ಕೆ ಮುನ್ನುಡಿ ಬರೆಯಬಹುದು ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿತ್ತು.

ಅಂತಿಮವಾಗಿ ಹಲವಾರು ಇಂಧನ ಸೌಲಭ್ಯಗಳ ಸುತ್ತಲಿನ ವಾಯು ರಕ್ಷಣೆಯ ಮೇಲೆ ದಾಳಿ ಮಾಡಲು ನಿರ್ಧರಿಸಲಾಯಿತು ಎಂದು ಇಸ್ರೇಲ್‌ ಅಧಿಕಾರಿಗಳು ತಿಳಿಸಿದ್ದಾರೆ.

(ನ್ಯೂಯಾರ್ಕ್‌ ಟೈಮ್ಸ್ ಹಾಗೂ ಇನ್ನಿತರ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿದ ಬರೆದ ವರದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.