ರಫಾ (ಗಾಜಾಪಟ್ಟಿ): ಗಾಜಾಪಟ್ಟಿಯಲ್ಲಿನ ದೊಡ್ಡ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ಪಡೆಗಳು ಸೋಮವಾರ ನಸುಕಿನಲ್ಲಿ ದಾಳಿ ನಡೆಸಿದ್ದು, ಹಮಾಸ್ ಬಂಡುಕೋರರು ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ದೂರಿವೆ.
ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳೊಂದಿಗೆ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲ್ ಪಡೆಗಳು, ಗುಂಡಿನ ದಾಳಿ ನಡೆಸಿವೆ ಎಂದು ಆಸ್ಪತ್ರೆಯೊಳಗೆ ಆಶ್ರಯ ಪಡೆದಿರುವವರು ಹೇಳಿದ್ದಾರೆ. ಸೇನಾ ಪಡೆಗಳು ಕಟ್ಟಡಗಳ ಮೇಲೆಯೂ ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿವೆ ಎಂದಿದ್ದಾರೆ.
‘ಮೂರು ತಿಂಗಳಿನಿಂದ ಚಿಕಿತ್ಸೆಗಾಗಿ ಇಲ್ಲಿದ್ದು ಈಗ ಒಳಗೆ ಸಿಲುಕಿಕೊಂಡಿದ್ದೇನೆ. ಯಾರಾದರೂ ಓಡಾಡುವುದು ಕಾಣಿಸಿದರೆ ಗುಂಡಿನ ಮಳೆಗರೆಯಲಾಗುತ್ತಿದೆ. ವೈದ್ಯರು, ಆಂಬುಲೆನ್ಸ್‌ಗಳು ಸಹ ಓಡಾಡುವಂತಿಲ್ಲ’ ಎಂದು ಆಸ್ಪತ್ರೆಯೊಳಗಿರುವ ಅಬ್ಡೆಲ್–ಹದಿ ಸಯೀದ್ ತಿಳಿಸಿದರು.
‘ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ರಕ್ಷಣೆ ಕೋರಿ ಆಶ್ರಯ ಬಯಸಿರುವ 30 ಸಾವಿರಕ್ಕೂ ಹೆಚ್ಚು ಜನರು ಈ ಆಸ್ಪತ್ರೆಯೊಳಗಿದ್ದಾರೆ. ವಿಶೇಷ ಶಸ್ತ್ರಚಿಕಿತ್ಸೆ ನಡೆಸುವ ಕಟ್ಟಡವನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ಸೇನಾ ಪಡೆಗಳು ಗುಂಡಿನ ದಾಳಿ ನಡೆಸಿವೆ’ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಶಿಫಾ ಆಸ್ಪತ್ರೆಯ ಕೆಳಭಾಗದಲ್ಲಿ ಹಲವು ಸೌಕರ್ಯಗಳೊಂದಿಗೆ ಹಮಾಸ್ ಬಂಡುಕೋರರು ಕಮಾಂಡಿಂಗ್ ಸೆಂಟರ್ ಹೊಂದಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್ ಪಡೆಯು, ವ್ಯಾಪಕ ದಾಳಿ ನಡೆಸುವ ಮೂಲಕ ಬಂಡುಕೋರರ ಅಡಗುದಾಣವನ್ನು ಕಳೆದ ನವೆಂಬರ್‌ನಲ್ಲೇ ನಾಶಪಡಿಸಿತ್ತು. ದಾಳಿಯ ವೇಳೆ ಬಂಡುಕೋರರು ಹೊಂದಿದ್ದ ಬಂಕರ್, ಶಸ್ತ್ರಾಸ್ತ್ರಗಳು ಹಾಗೂ ಸುರಂಗ ಮಾರ್ಗದ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಆಸ್ಪತ್ರೆಯು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.