ಸಿಡ್ನಿ (ಆಸ್ಟ್ರೇಲಿಯಾ): ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ನಡೆಸುವ ಆತಂಕ ಎದುರಾಗಿದೆ. ಬೈರೂತ್ ವಿಮಾನ ನಿಲ್ದಾಣ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ, ತಕ್ಷಣವೇ ಲೆಬನಾನ್ ತೊರೆಯುವಂತೆ ತನ್ನ ಪ್ರಜೆಗಳಿಗೆ ಆಸ್ಟ್ರೇಲಿಯಾ ಕರೆ ನೀಡಿದೆ.
ಕಳೆದ ವರ್ಷ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾದಾಗಿಂದ ಲೆಬನಾನಿನ ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್ ಪಡೆ ನಡುವೆ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಸಂಘರ್ಷ ತೀವ್ರಗೊಂಡಿದೆ.
ಲೆಬನಾನ್‌ನಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಸುವ ಸಾಧ್ಯತೆಯ ಬಗ್ಗೆ ಇಸ್ರೇಲ್ ಸೇನಾ ಪಡೆ ಮುಖ್ಯಸ್ಥ ಹೇಳಿಕೆ ನೀಡಿದ್ದು, ಆತಂಕ ಸೃಷ್ಟಿಸಿದೆ.
ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆಯ ಮಾಹಿತಿ ಪ್ರಕಾರ, ಅಂದಾಜು 15,000 ಆಸ್ಟ್ರೇಲಿಯನ್ನರು ಲೆಬನಾನ್‌ನಲ್ಲಿದ್ದಾರೆ.
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರು, ಇಸ್ರೇಲ್, ಲೆಬನಾನ್ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಬೈರೂತ್ ವಿಮಾನ ನಿಲ್ದಾಣ ದೀರ್ಘಾವಧಿವರೆಗೆ ಮುಚ್ಚುವ ಸಾಧ್ಯತೆ ಇದೆ. ಆಸ್ಟ್ರೇಲಿಯನ್ನರು ಕೂಡಲೇ ಹೊರಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಅವರು, ಬ್ರಿಟನ್ ವಿದೇಶಾಂಗ ಸಚಿವರನ್ನೂ ಭೇಟಿಯಾಗಿದ್ದು, ಲೆಬನಾನ್‌ನಲ್ಲಿ ಕದನ ವಿರಾಮ ಏರ್ಪಡಿಸುವ ಸಂಬಂಧ ಚರ್ಚಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು, ಪ್ರಜೆಗಳನ್ನು ಜಲಮಾರ್ಗವಾಗಿಯಾದರೂ ವಾಪಸ್ ಕರೆತರುವ ನಿಟ್ಟಿನಲ್ಲೂ ಸರ್ಕಾರ ಯೋಜಿಸಿದೆ ಎಂದಿರುವುದಾಗಿ 'Sky' ನ್ಯೂಸ್ ವರದಿ ಮಾಡಿದೆ. ಆದರೆ, ಅಲ್ಬನೀಸ್ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.
ಈ ಬೆಳವಣಿಗೆಯಿಂದ ಬ್ರಿಟನ್ ಸಹ ಎಚ್ಚೆತ್ತುಕೊಂಡಿದೆ. ಸಂಘರ್ಷಪೀಡಿತ ದೇಶಗಳಿಗೆ ಸಮೀಪವಿರುವ ದ್ವೀಪರಾಷ್ಟ್ರ ಸಿಪ್ರಸ್‌ನಲ್ಲಿ, ನೌಕಾಪಡೆ 'ರಾಯಲ್ ನಾವಿ'ಯ ಎರಡು ಹಡಗುಗಳು ಈಗಾಗಲೇ ಬೀಡುಬಿಟ್ಟಿವೆ. ಲೆಬನಾನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರಿಗೆ ನೆರವಾಗಲು ಸೇನಾ ಪಡೆಗಳನ್ನೂ ಬ್ರಿಟನ್ ಕಳುಹಿಸಿದೆ.
2006ರಲ್ಲಿ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಸಂಘರ್ಷ ಉಂಟಾದಾಗ, ಸಿರಿಯಾ, ಜೋರ್ಡನ್, ಸಿಪ್ರಸ್ ಮತ್ತು ಟರ್ಕಿ ಸಹಕಾರದೊಂದಿಗೆ ಆಸ್ಟ್ರೇಲಿಯಾ ಸುಮಾರು 5,000 ನಾಗರಿಕರನ್ನು ಹಾಗೂ 1,200 ವಿದೇಶಿಯರನ್ನು ಲೆಬನಾನ್‌ನಿಂದ ಸ್ಥಳಾಂತರಿಸಿತ್ತು. ಆಗ 17 ಹಡಗುಗಳು, 22 ಯುದ್ಧ ವಿಮಾನಗಳು ಮತ್ತು 470ಕ್ಕೂ ಅಧಿಕ ಬಸ್‌ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಹಿಜ್ಬುಲ್ಲಾ ಬಂಡುಕೋರರ ತಾಣವನ್ನು ಗುರಿಯಾಗಿಸಿಕೊಂಡು ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದ ಮೇಲೆ ಇಸ್ರೇಲ್ ಸೇನೆ ಮಂಗಳವಾರ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 50 ಮಕ್ಕಳು, 94 ಮಹಿಳೆಯರು ಸೇರಿದಂತೆ 560ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. 1,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ, ಇಸ್ರೇಲ್‌ನ ಪ್ರಮುಖ ನಗರ ಟೆಲ್ ಅವಿವ್ ಮೇಲೆ ಲೆಬನಾನ್ ಬುಧವಾರ ಕ್ಷಿಪಣಿ ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.