ಜೆರುಸಲೇಂ: ಪ್ಯಾಲೆಸ್ಟೀನಿ ಸುನ್ನಿ ಇಸ್ಲಾಮಿಕ್ ಮೂಲಭೂತವಾದಿ ಬಂಡುಕೋರರ ಸಂಘಟನೆಯಾದ ‘ಹಮಾಸ್’ಅನ್ನು (ಇಸ್ಲಾಮಿಕ್ ಪ್ರತಿರೋಧ ಚಳುವಳಿ) 1987ರಲ್ಲಿ ನಡೆದ ಪ್ರಥಮ ಪ್ಯಾಲೆಸ್ಟೀನಿಯನ್ನರ ದಂಗೆ ವೇಳೆ ಸ್ಥಾಪಿಸಲಾಯಿತು.
1920ರಲ್ಲಿ ಈಜಿಪ್ಟ್‌ನಲ್ಲಿ ಸ್ಥಾಪನೆಯಾದ ಸುನ್ನಿ ಇಸ್ಲಾಂ ಸಂಘಟನೆ ‘ಮುಸ್ಲಿಂ ಬ್ರದರ್‌ವುಡ್’ನ ಸಿದ್ಧಾಂತಗಳನ್ನು ಹಮಾಸ್ ಬಂಡುಕೋರರು ಅಳವಡಿಸಿಕೊಂಡಿದ್ದಾರೆ.
2006ರ ಪ್ಯಾಲೆಸ್ಟೀನ್ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಹಮಾಸ್, ಗಾಜಾವನ್ನು ವಶಕ್ಕೆ ಪಡೆಯಿತು. 2007ರ ಗಾಜಾ ಕದನದ (ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ನೇತೃತ್ವದ ಪಡೆ ಮತ್ತು ಹಮಾಸ್ ನಡುವಿನ ಕದನ) ಬಳಿಕ ಗಾಜಾ ಪಟ್ಟಿಯಲ್ಲಿ ಹಮಾಸ್ ಅಧಿಕಾರ ಸ್ಥಾಪಿಸಿತು.
ಅಲ್ಲಿಂದ ಈಚೆಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಹಲವಾರು ಬಾರಿ ಸಂಘರ್ಷಗಳು ನಡೆದಿವೆ.
‘ಇಝ್ ಎಲ್–ದೀನ್ ಅಲ್–ಖಸ್ಸಮ್ ಬ್ರಿಗೇಡ್’ ಎಂಬ ಹೆಸರಿನ ಸಶಸ್ತ್ರ ಪಡೆಯನ್ನು ಹಮಾಸ್ ಹೊಂದಿದೆ. ತನ್ನ ಪಡೆಯ ಸದಸ್ಯರನ್ನು ಇಸ್ರೇಲ್‌ಗೆ ಕಳಿಸಿ ಬಂದೂಕು ದಾಳಿ ಮತ್ತು ಆತ್ಮಾಹುತಿ ದಾಳಿಗಳನ್ನು ಹಮಾಸ್ ಹಲವಾರು ಬಾರಿ ನಡೆಸಿದೆ.
ಇಸ್ರೇಲ್, ಅಮೆರಿಕ, ಯುರೋಪ್ ಒಕ್ಕೂಟ, ಕೆನಡಾ ಮತ್ತು ಜಪಾನ್ ದೇಶಗಳು ‘ಹಮಾಸ್’ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.