ADVERTISEMENT

ಪೋಲಿಯೊ ಅಭಿಯಾನ ನಡೆಯುತ್ತಿದ್ದ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಡ್ರೋನ್ ದಾಳಿ

ಏಜೆನ್ಸೀಸ್
Published 3 ನವೆಂಬರ್ 2024, 10:35 IST
Last Updated 3 ನವೆಂಬರ್ 2024, 10:35 IST
<div class="paragraphs"><p>ಗಾಜಾದಲ್ಲಿ ವಿಶ್ವಸಂಸ್ಥೆಯಿಂದ ಪೋಲಿಯೊ ಲಸಿಕೆ ಅಭಿಯಾನ</p></div>

ಗಾಜಾದಲ್ಲಿ ವಿಶ್ವಸಂಸ್ಥೆಯಿಂದ ಪೋಲಿಯೊ ಲಸಿಕೆ ಅಭಿಯಾನ

   

–ರಾಯಿಟರ್ಸ್ ಚಿತ್ರ

ಕೈರೊ: ಪೋಲಿಯೊ ಲಸಿಕೆ ನೀಡಲಾಗುತ್ತಿದ್ದ ಉತ್ತರ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಪಡೆಗಳು ಡ್ರೋನ್ ದಾಳಿ ನಡೆಸಿದ್ದರಿಂದ ನಾಲ್ವರು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.

ADVERTISEMENT

ಶನಿವಾರ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಕಳೆದೊಂದು ವರ್ಷದಿಂದ ಈ ಪ್ರದೇಶವನ್ನು ಇಸ್ರೇಲ್ ಪಡೆಗಳು ಸುತ್ತುವರಿದಿವೆ.

ಗಾಜಾ ನಗರದಲ್ಲಿರುವ ಶೇಖ್‌ ರದ್ವನ್‌ ಕ್ಲಿನಿಕ್‌ ಮೇಲೆ ಶನಿವಾರ ಮಧ್ಯಾಹ್ನ ಇಸ್ರೇಲ್ ಪಡೆಗಳು ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಪ್ರತಿನಿಧಿಗಳು ತೆರಳಿದ ಕೂಡಲೇ ದಾಳಿ ನಡೆಸಲಾಗಿದೆ ಎಂದು ಗಾಜಾ ಆರೋಗ್ಯ ಸಚಿವಾಲಯದ ನಿರ್ದೇಶಕ ಡಾ. ಮುನೀರ್‌ ಅಲ್–ಬೌರುಷ್‌ ತಿಳಿಸಿದ್ದಾರೆ.

ವಿಶ್ವಸಂಸ್ಥೆ ಹಾಗೂ ಯುನಿಸೆಫ್ ಜಂಟಿಯಾಗಿ ಸ್ಥಳದಲ್ಲಿ ಪೋಲಿಯೋ ಅಭಿಯಾನ ನಡೆಸುತ್ತಿದ್ದವು. ದಾಳಿಯ ಬಗ್ಗೆ ಅವುಗಳು ಕಳವಳ ವ್ಯಕ್ತಪಡಿಸಿವೆ.

‘ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುತ್ತಿದ್ದ ಶೇಖ್ ರದ್ವಾನ್ ಕ್ಲಿನಿಕ್‌ ಮೇಲೆ ದಾಳಿ ನಡೆದಿರುವ ವರದಿಗಳು ನೋವುಂಟು ಮಾಡಿದೆ’ ಎಂದು ಯುನಿಸೆಫ್ ವಕ್ತಾರ ರೊಸಾಲಿಯಾ ಬೊಲ್ಲೆನ್ ಹೇಳಿದ್ದಾರೆ.

ಮಾನವೀಯ ನೆರವಿನ ವಿರಾಮ ಜಾರಿಯಲ್ಲಿರುವಾಗಲೇ ದಾಳಿ ನಡೆದಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 4ರವರೆಗೆ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರೂ, ಅದು ಪಾಲನೆಯಾಗಿಲ್ಲ’ ಎಂದು ಹೇಳಿದ್ದಾರೆ.

ನಿರ್ದಿಷ್ಟ ಸಮಯದಲ್ಲಿ ಆ ಪ್ರದೇಶದಲ್ಲಿ ದಾಳಿ ಮಾಡಲಿಲ್ಲ ಎಂದು ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾಡವ್ ಶೋಶನಿ ಹೇಳಿದ್ದಾರೆ.

ಅಕ್ಟೋಬರ್‌ 23ರಂದು ನಡೆಯಬೇಕಿದ್ದ ಈ ಪೋಲಿಯೊ ಅಭಿಯಾನವು, ಇಸ್ರೇಲಿ ಬಾಂಬ್ ದಾಳಿ, ಸಾಮೂಹಿಕ ಸ್ಥಳಾಂತರದ ಆದೇಶ ಹಾಗೂ ಮಾನವೀಯ ನೆರವಿಗೆ ನೀಡುವ ವಿರಾಮಗಳ ಬಗ್ಗೆ ಭರವಸೆ ನೀಡದಿದ್ದರಿಂದ ಶನಿವಾರಕ್ಕೆ ಮುಂದೂಡಲಾಗಿತ್ತು ಎಂದು ವಿಶ್ವಸಂಸ್ಥೆ ತಿಳಿಸಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.