ವಾಷಿಂಗ್ಟನ್: ಹಮಾಸ್ ಬಂಡುಕೊರರಿಂದ ದಾಳಿಗೆ ತುತ್ತಾಗಿರುವ ಇಸ್ರೇಲ್‌ಗೆ ಅಮೆರಿಕ ಭಾರಿ ಸೇನಾ ನೆರವು ಘೋಷಿಸಿದೆ. ಅತ್ಯಾಧುನಿಕ ವಿಮಾನವಾಹಕ ನೌಕೆ ‘ಫೋರ್ಡ್’ ಸೇರಿ ನೌಕೆಗಳು ಹಾಗೂ ವಿಮಾನಗಳನ್ನು ಕಳುಹಿಸಿಕೊಡುವುದಾಗಿ ಹೇಳಿದೆ.
ಪೋರ್ಡ್ ಅನ್ನು ಪೂರ್ವ ಮೆಡಿಟರೇನಿಯನ್‌ಗೆ ಕಳುಹಿಸಿ ಇಸ್ರೇಲ್‌ಗೆ ಬೆಂಬಲ ನೀಡುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಭಾನುವಾರ ತಿಳಿಸಿದ್ದಾರೆ.
ಯುಎಸ್‌ಎಸ್ ಗೆರಾಲ್ಡ್ ಆರ್. ಫೋರ್ಡ್, ನೌಕಾಪಡೆಯ ನೂತನ ಮತ್ತು ಅತ್ಯಾಧುನಿಕ ವಿಮಾನವಾಹಕ ನೌಕೆಯಾಗಿದ್ದು, ಸರಿಸುಮಾರು 5,000 ನಾವಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಯುದ್ಧವಿಮಾನಗಳ ಡೆಕ್ ಕ್ರೂಸರ್‌ಗಳು ಮತ್ತು ಶಸ್ತ್ರಾಸ್ತ್ರಗಳು ಇದರಲ್ಲಿ ಇರಲಿದೆ. ಎಂಥಹದೇ ದಾಳಿಗೆ ಪ್ರತ್ಯುತ್ತರ ನೀಡಲು ಈ ನೌಕೆ ಸಜ್ಜಾಗಿರಲಿದೆ. ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಹಮಾಸ್ ತಲುಪದಂತೆ ತಡೆಯುವುದರ ಜತೆಗೆ ಕಣ್ಗಾವಲನ್ನೂ ಈ ನೌಕೆ ನಡೆಸಲಿದೆ.
ಫೋರ್ಡ್ ನೌಕೆ ಜತೆಗೆ ಯುಎಸ್‌ಎಸ್ ನೋರ್ಮಾಂಡಿ ನೌಕೆ ಹಾಗೂ ವಿಧ್ವಂಸಕ ನೌಕೆಗಳಾದ ಥೋಮಸ್ ಹಡ್ನರ್, ಯುಎಸ್‌ಎಸ್ ರಾಮೇಜ್, ಯುಎಸ್‌ಎಸ್ ಕಾರ್ನಿ ಹಾಗೂ ಯುಎಸ್‌ಎಸ್ ರೂಸ್‌ವೆಲ್ಟ್‌ಗಳನ್ನು ಕೂಡ ಅಮೆರಿಕ ಕಳುಹಿಸಿಕೊಡಲಿದೆ. ವಾಯುಸೇನೆಯ F-35, F-15, F-16 ಹಾಗೂ A-10 ಯುದ್ಧವಿಮಾನಗಳು ಕೂಡ ಕಳುಹಿಸಿಕೊಡುವುದಾಗಿ ಅಮೆರಿಕ ಹೇಳಿದೆ.
ಇವೆಲ್ಲವುಗಳ ಜತೆಗೆ ಇಸ್ರೇಲ್ ರಕ್ಷಣಾ ಪಡೆಗೆ ಬೇಕಾದ ಯುದ್ಧ ಸಾಮಾಗ್ರಿ ಸೇರಿದಂತೆ ಹೆಚ್ಚುವರಿ ಉಪಕರಣಗಳು ಮತ್ತು ಸಂಪನ್ಮೂಲಗಳು ತ್ವರಿತವಾಗಿ ನೀಡಲಿದ್ದೇವೆ ಎಂದು ಅಸ್ಟಿನ್ ಪ್ರಕಟಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಮೆರಿಕದ ನಾಲ್ವರು ನಾಗರಿಕರು ಸಂಘರ್ಷದಲ್ಲಿ ಮೃತಪಟ್ಟಿದ್ದು, 7 ಮಂದಿ ಕಾಣೆಯಾಗಿದ್ದಾರೆ. ಘಟನೆ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜತೆ ದೂರವಾಣಿ ಮೂಲಕ ಭಾನುವಾರ ಮಾತನಾಡಿದ್ದಾರೆ. ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿಕೊಂಡಿರುವವರ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.