ಜೆರುಸಲೇಂ: 'ನನ್ನನ್ನು ಹತ್ಯೆಗೈಯಲು ಹಿಜ್ಬುಲ್ಲಾ ಸಂಘಟನೆ ನಡೆಸಿದ ಪ್ರಯತ್ನವು ಘೋರ ತಪ್ಪು' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ತಮ್ಮ ಖಾಸಗಿ ನಿವಾಸದ ಮೇಲೆ ಶನಿವಾರ ನಡೆದ ಡ್ರೋನ್ ದಾಳಿಯ ಬಗ್ಗೆ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಆದರೆ, ಈ ಕೃತ್ಯದ ಹೊಣೆಯನ್ನು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯಾಗಲಿ, ಕಳೆದ ವರ್ಷ ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಹಮಾಸ್ ಆಗಲಿ ಈವರೆಗೆ ಹೊತ್ತುಕೊಡಿಲ್ಲ.
ದಾಳಿ ನಡೆದಿರುವುದನ್ನು ಶನಿವಾರವೇ ಖಚಿತಪಡಿಸಿರುವ ಇಸ್ರೇಲ್ ಸೇನೆ, 'ದಾಳಿ ಆದ ಹೊತ್ತಲ್ಲಿ ಪ್ರಧಾನಿ ಅಥವಾ ಅವರ ಪತ್ನಿ, ನಿವಾಸದಲ್ಲಿ ಇರಲಿಲ್ಲ. ಹಾಗಾಗಿ ಯಾರೊಬ್ಬರೂ ಗಾಯಗೊಂಡಿಲ್ಲ' ಎಂದಿದೆ.
ಕನಿಷ್ಠ 73 ಪ್ಯಾಲೆಸ್ಟೀನಿಯರು ಮೃತ
ಉತ್ತರ ಗಾಜಾದ ಬೀಟ್ ಲಹಿಯಾ ಪಟ್ಟಣದ ಹಲವು ಮನೆಗಳು ಮತ್ತು ಬಹುಮಹಡಿ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮಾಧ್ಯಮಗಳು ವರದಿ ಮಾಡಿವೆ. ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅಂಕಿ-ಅಂಶಗಳು ಖಚಿತವಾಗಿವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಮೆಡ್ವೇ ಅಬ್ಬಾಸ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.