ದೇರ್ ಅಲ್ ಬಲಾಹ್ (ಗಾಜಾ ಪಟ್ಟಿ): ನಿರಾಶ್ರಿತರ ಕೇಂದ್ರವಾಗಿ ಮಾರ್ಪಾಡಾಗಿದ್ದ ದಕ್ಷಿಣ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲಿ ಪಡೆಗಳು ಮಂಗಳವಾರ ನಡೆಸಿದ ವಾಯುದಾಳಿಗೆ ಕನಿಷ್ಠ 25 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ.
ಶಾಲೆಯ ಪ್ರವೇಶ ದ್ವಾರದ ಬಳಿಯೇ ದಾಳಿ ನಡೆದಿದ್ದು, ಕನಿಷ್ಠ 7 ಮಹಿಳೆಯರು ಹಾಗೂ ಮಕ್ಕಳು ಸಾವಿಗೀಡಾಗಿದ್ದಾರೆ. ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಉತ್ತರ ಭಾಗದಲ್ಲಿ ನಡೆದ ಈ ಭಾರಿ ಬಾಂಬ್ ದಾಳಿಯಿಂದಾಗಿ ಗಾಜಾದಲ್ಲಿ ವೈದ್ಯಕೀಯ ಸೌಲಭ್ಯಗಳು ಬಂದ್ ಆಗಿದ್ದು, ಸಾವಿರಾರು ಮಂದಿ ಆಶ್ರಯ ಹುಡುಕಿಕೊಂಡು ವಲಸೆ ಹೋಗಿದ್ದಾರೆ.
ಕಳೆದ 9 ತಿಂಗಳಿನಿಂದ ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದು, ಗಾಜಾ ಹಾಗೂ ಅದರ ಸುತ್ತಮುತ್ತ ಇರುವ ನಗರ ಪ್ರದೇಶಗಳು ಇಸ್ರೇಲಿ ಪಡೆಗಳ ದಾಳಿಗೆ ಸಿಲುಕಿ ನೆಲಸಮವಾಗಿವೆ. ಯುದ್ಧದ ಪ್ರಾರಂಭವಾದ ಬಳಿಕ ಹಲವು ನಾಗರಿಕರು ವಲಸೆ ಹೋಗಿದ್ದು, ಸಾವಿರಾರು ಪ್ಯಾಲೆಸ್ಟೀನಿಯನ್ನರು ಉತ್ತರ ಭಾಗದಲ್ಲಿ ಉಳಿದಿದ್ದರು.
‘ದಾಳಿ ತೀವ್ರವಾಗಿದೆ. ಯಾವುದಾದರೂ ಚಲಿಸುವ ವಸ್ತು ಕಂಡರೆ ಇಸ್ರೇಲ್‌ನ ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳು ದಾಳಿ ನಡೆಸುತ್ತಿವೆ. ಟ್ಯಾಂಕ್‌ಗಳು ಕೇಂದ್ರ ಭಾಗದ ಜಿಲ್ಲೆಗಳತ್ತ ತೆರಳಿವೆ’ ಎಂದು ಗಾಜಾ ನಗರದಿಂದ ತಮ್ಮ ಸಂಬಂಧಿಕರು ಇರುವ ತುಫ್ಪಾ ಜಿಲ್ಲೆಗೆ ವಲಸೆ ಹೋಗಿರುವ ಅಬ್ದುಲ್ –ಬಾರ್ ಎಂಬುವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.