ADVERTISEMENT

Israel - Hamas War | ಗಾಜಾದ ಅಲ್‌–ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ

ಏಜೆನ್ಸೀಸ್
Published 15 ನವೆಂಬರ್ 2023, 10:12 IST
Last Updated 15 ನವೆಂಬರ್ 2023, 10:12 IST
<div class="paragraphs"><p>ಖಾನ್‌ ಯೂನಿಸ್‌ನ ನಿರಾಶ್ರಿತರ ಕೇಂದ್ರದಲ್ಲಿ ಮಳೆ ನೀರನ್ನು ಶೇಖರಿಸಿಕೊಳ್ಳುತ್ತಿರುವುದು</p></div>

ಖಾನ್‌ ಯೂನಿಸ್‌ನ ನಿರಾಶ್ರಿತರ ಕೇಂದ್ರದಲ್ಲಿ ಮಳೆ ನೀರನ್ನು ಶೇಖರಿಸಿಕೊಳ್ಳುತ್ತಿರುವುದು

   

–ರಾಯಿಟರ್ಸ್ ಚಿತ್ರ

ಗಾಜಾ ಪಟ್ಟಿ: ಸಾವಿರಾರು ಮಂದಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ನಿರಾಶ್ರಿತರು ಆಶ್ರಯ ಪಡೆಯುತ್ತಿರುವ ಗಾಜಾದ ಅತಿ ದೊಡ್ಡ ಆಸ್ಪತ್ರೆ ಅಲ್–ಶಿಫಾಗೆ ಇಸ್ರೇಲ್ ಪಡೆಗಳು ನುಗ್ಗಿವೆ.

ADVERTISEMENT

ಆಸ್ಪತ್ರೆಯೊಳಗೆ ಸಾವಿರಾರು ಮಂದಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಸೇನಾ ಕಾರ್ಯಾಚರಣೆಯು ಆತಂಕ ಮೂಡಿಸಿದೆ.

ಮಾಸ್ಕ್ ಧರಿಸಿದ್ದ ಹಲವು ಮಂದಿ ಸೇರಿ ಹನ್ನೆರಡಕ್ಕೂ ಹೆಚ್ಚು ಇಸ್ರೇಲಿ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಬಂದರು. ಯುವಕರನ್ನು ಶರಣಾಗುವಂತೆ ಹೇಳಿದರು ಎಂದು ಸ್ಥಳದಲ್ಲಿದ್ದ ಪತ್ರಕರ್ತರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯ ಸಂಕೀರ್ಣದಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗಿವೆ. ತುರ್ತುನಿಗಾ ಘಟಕದಲ್ಲಿ ಹಾಗೂ ಆಸ್ಪತ್ರೆಯ ಹಲವು ಕಡೆಗಳಲ್ಲಿ ಡಜನ್‌ಗೂ ಅಧಿಕ ಸೈನಿಕರು ಹಾಗೂ ಕಮಾಂಡೊಗಳು ಇದ್ದಾರೆ ಎಂದು ಆಸ್ಪತ್ರೆಯಲ್ಲಿದ್ದ ಹಮಾಸ್‌ನ ಆರೋಗ್ಯ ಸಚಿವಾಲಯದ ಅಧಿಕಾರಿ ಯೂಸುಫ್ ಅಬು ರಿಷ್‌ ಹೇಳಿದ್ದಾರೆ.

ಆಸ್ಪತ್ರೆಗೆ ನುಗ್ಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಸೇನೆ, ನಿರ್ದಿಷ್ಟ ಸ್ಥಳದಲ್ಲಿ ‘ನಿಖರವಾದ ಮತ್ತು ಉದ್ದೇಶಿತ’ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಿದೆ.

ಅಲ್‌–ಶಿಫಾ ಆಸ್ಪತ್ರೆಯನ್ನು ರಕ್ಷಿಸಬೇಕಾಗಿದೆ ಎಂದು ಅಮೆರಿಕ ಎಚ್ಚರಿಸಿದರೂ, ಇಸ್ರೇಲ್ ಈ ದಾಳಿ ನಡೆಸಿದೆ. ಆದರೆ ಈ ಕಾರ್ಯಾಚರಣೆ ಅಗತ್ಯವಾಗಿತ್ತು ಎಂದು ಇಸ್ರೇಲ್ ಹೇಳಿದೆ.

ಈ ಆಸ್ಪತ್ರೆಯ ಕೆಳಗೆ ಸುರಂಗದಲ್ಲಿ ಹಮಾಸ್‌ನ ಕಮಾಂಡ್‌ ಸೆಂಟರ್‌ ಇದೆ ಎಂದು ಇಸ್ರೇಲ್ ಆರೋಪಿಸುತ್ತಲೇ ಬಂದಿದೆ. ಆದರೆ ಇದನ್ನು ಹಮಾಸ್‌ ಹಲವು ಬಾರಿ ನಿರಾಕರಿಸಿದೆ.

ವಿಶ್ವಸಂಸ್ಥೆಯ ವರದಿ ಪ್ರಕಾರ ಆಸ್ಪತ್ರೆಯಲ್ಲಿ ರೋಗಿಗಳು, ಸಿಬ್ಬಂದಿಗಳು ಹಾಗೂ ನಿರಾಶ್ರಿತರು ಸೇರಿ ಕನಿಷ್ಠ 2,300 ಮಂದಿ ಇದ್ದಾರೆ. ಸತತ ಗುಂಡಿನ ದಾಳಿಯಿಂದಾಗಿ ಅವರು ತಪ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.

ಆಸ್ಪತ್ರೆಯೊಳಗಿನ ಪರಿಸ್ಥಿತಿ ಭೀಕರವಾಗಿದ್ದು, ಅರಿವಳಿಕೆ ಇಲ್ಲದೆ ಚಿಕಿತ್ಸೆ ನಡೆಯುತ್ತಿದೆ. ನೀರು, ಆಹಾರದ ಕೊರತೆ ಉಂಟಾಗಿದೆ. ಆಸ್ಪತ್ರೆಯಾದ್ಯಂತ ಕೊಳೆತ ಶವಗಳ ದುರ್ನಾತ ಬೀರುತ್ತಿದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.