ಜೆರುಸಲೇಂ: ತನ್ನ ಮೇಲೆ ದಾಳಿ ಮಾಡಿದ ಪ್ಯಾಲೆಸ್ಟೀನ್ ಬಂಡುಕೋರರ ಕುಟುಂಬ ಸದಸ್ಯರನ್ನು ಗಡೀಪಾರು ಮಾಡಲು ನಿರ್ಧರಿಸಿರುವ ಇಸ್ರೇಲ್, ಇದಕ್ಕಾಗಿ ಗುರುವಾರ ನೂತನ ಮಸೂದೆಯನ್ನು ಅಂಗೀಕರಿಸಿದೆ.
ಪ್ಯಾಲೆಸ್ಟೀನ್ ಬಂಡುಕೋರರ ಹಲವು ಕುಟುಂಬಗಳ ಸದಸ್ಯರು ಇಸ್ರೇಲ್‌ನಲ್ಲಿ ವಾಸವಿದ್ದಾರೆ. ಈ ಪೈಕಿ ಇಸ್ರೇಲ್‌ನ ಪೌರತ್ವವನ್ನು ಪಡೆದುಕೊಂಡಿರುವವರೂ ಇದ್ದಾರೆ.
ಇವರನ್ನು 7 ರಿಂದ 20 ವರ್ಷಗಳ ಅವಧಿಗೆ ಗಾಜಾ ಪಟ್ಟಿ ಅಥವಾ ಇತರ ಪ್ರದೇಶಗಳಿಗೆ ಗಡೀಪಾರು ಮಾಡಲು ನೂತನ ಮಸೂದೆಯು ಅವಕಾಶ ನೀಡುತ್ತದೆ. ಇಸ್ರೇಲ್‌ನಲ್ಲಿರುವ ಪ್ಯಾಲೆಸ್ಟೀನ್ ಸದಸ್ಯರು ಹಾಗೂ ಪೂರ್ವ ಜೆರುಸಲೇಂ ಪ್ರದೇಶದಲ್ಲಿರುವ ಜನರಿಗೆ ಈ ನೀತಿ ಅನ್ವಯವಾಗಲಿದೆ.
ಇಸ್ರೇಲ್ ವಶದಲ್ಲಿರುವ ವೆಸ್ಟ್ ಬ್ಯಾಂಕ್‌ನಲ್ಲಿರುವ ಜನರಿಗೆ ಈ ನೀತಿ ಅನ್ವಯವಾಗುತ್ತದೆಯೇ, ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಹಾಗೂ ಅದರ ಮಿತ್ರಪಕ್ಷಗಳ ಸದಸ್ಯರ ಬೆಂಬಲದೊಂದಿಗೆ 61–41 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಯಿತು.
ಪ್ಯಾಲೆಸ್ಟೀನ್ ದಾಳಿಕೋರರ ಕುಟುಂಬ ಸದಸ್ಯರಾಗಿರುವ ಇವರಿಗೆ ಇಸ್ರೇಲ್ ಮೇಲಿನ ದಾಳಿ ಬಗ್ಗೆ ಮೊದಲೇ ತಿಳಿದಿರುತ್ತದೆ. ಭಯೋತ್ಪಾದನೆಯಂತಹ ಕೃತ್ಯಕ್ಕೆ ಇವರು ಬೆಂಬಲ ನೀಡಿದ್ದಾರೆ ಎಂಬ ಕಾರಣದಿಂದ ಗಡೀಪಾರು ಮಾಡಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.