ಟೆಲ್ ಅವೀವ್: ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ ಒತ್ತೆಯಾಳುಗಳ ವಿವರಗಳನ್ನು ಇಸ್ರೇಲ್ ಪ್ರಧಾನಿ ಕಚೇರಿ ಬಹಿರಂಗಪಡಿಸಿದೆ.
ಎಲ್ಲಾ ಒತ್ತೆಯಾಳುಗಳನ್ನು, ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ವಾಪಸ್ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಇಸ್ರೇಲ್ ಪಿಎಂ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಬಿಡುಗಡೆಯಾದ ಒತ್ತೆಯಾಳುಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಣ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರ ಆರಂಭವಾಗಿದ್ದು, ಹಮಾಸ್ ಬಂಡುಕೋರರು ಮೊದಲ ಹಂತದಲ್ಲಿ 13 ಇಸ್ರೇಲ್ ಪ್ರಜೆಗಳು ಸೇರಿದಂತೆ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನೊಂದೆಡೆ, ಇಸ್ರೇಲ್ ಸೇನೆಯು ತನ್ನ ಜೈಲುಗಳಲ್ಲಿ ಇರಿಸಿರುವ ಪ್ಯಾಲೆಸ್ಟೀನಿಯನ್ನರ ಪೈಕಿ 39 ಜನರನ್ನು ಬಿಡುಗಡೆ ಮಾಡಿದೆ. ಕದನ ವಿರಾಮದ ಅವಧಿಯಲ್ಲಿ ಇಸ್ರೇಲ್, 150 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಲಿದೆ.
'13 ಇಸ್ರೇಲಿಗರು, 10 ಮಂದಿ ಥಾಯ್ಲೆಂಡ್ ಪ್ರಜೆಗಳು ಹಾಗೂ ಒಬ್ಬ ಫಿಲಿಪ್ಪೀನ್ ಪ್ರಜೆಯನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ’ ಎಂದು ಕತಾರ್ ಹೇಳಿದೆ.
ನಾಲ್ಕು ದಿನಗಳ ಕದನ ವಿರಾಮದ ಅವಧಿಯಲ್ಲಿ ಹಮಾಸ್ ಬಂಡುಕೋರರು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.