ಜೆರುಸೆಲೇಂ/ಬೈರೂತ್: ಅಮೆರಿಕ ರೂಪಿಸಿದ ಯೋಜನೆಯಂತೆ ಹಿಜ್ಬುಲ್ಲಾ ಸಂಘಟನೆಯೊಂದಿಗೆ ಕದನವಿರಾಮ ಘೋಷಿಸುವ ಸಂಬಂಧ ಇಸ್ರೇಲ್‌ನ ಸಂಪುಟವು ಮಂಗಳವಾರ ಒಪ್ಪಿಗೆ ನೀಡುವ ಸಂಭವವಿದೆ. ಈ ಮೂಲಕ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಇಸ್ರೇಲ್–ಹಿಜ್ಬುಲ್ಲಾ ಯುದ್ಧವು ಅಂತ್ಯಗೊಳ್ಳುವ ಸಾಧ್ಯತೆ ಇದೆ.
‘ಕದನವಿರಾಮ ಘೋಷಣೆಗೆ ಯಾವ ಅಡೆತಡೆಗಳೂ ಸದ್ಯದ ಮಟ್ಟಿಗೆ ಇಲ್ಲ. ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರು ತಮ್ಮ ಮನಸ್ಸು ಬದಲಿಸುವವರೆಗೆ ಯಾವ ತೊಂದರೆಯೂ ಇಲ್ಲ’ ಎಂದು ಲೆಬನಾನ್‌ನ ಸಂಸತ್ತಿನ ಉಪಸ್ಪೀಕರ್ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕದನವಿರಾಮ ಘೋಷಣೆ ಕುರಿತು ಪ್ರತಿಕ್ರಿಯಿಸಲು ಇಸ್ರೇಲ್ ಸೋಮವಾರ ನಿರಾಕರಿಸಿತ್ತು.
ಹಿಜ್ಬುಲ್ಲಾ ಜೊತೆ ಮಾತುಕತೆ ನಡೆಸಲು ಅಮೆರಿಕವು ತನ್ನ ಸಂಸತ್ತಿನ ಸ್ಪೀಕರ್ ನೆಬಿ ಬೆರಿ ಅವರನ್ನು ಕಳುಹಿಸಿದೆ.
ಕದನವಿರಾಮ ಘೋಷಣೆಯಾದರೂ ಅದನ್ನು ಜಾರಿಗೊಳಿಸಲು 60 ದಿನಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಹಿಜ್ಬುಲ್ಲಾದ ಹಿಡಿತದಲ್ಲಿರುವ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು ಇಸ್ರೇಲ್ ವಾಪಸ್ ಕರೆಸಿಕೊಳ್ಳಬೇಕು. ಜೊತೆಗೆ, ಈ ಪ್ರದೇಶದಲ್ಲಿ ಲೆಬನಾನ್ ತನ್ನ ಸೈನ್ಯ ನಿಯೋಜನೆಗೊಳ್ಳಬೇಕು. ಜೊತೆಗೆ, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯೂ ಇರಲಿದೆ ಎಂದು ಷರತ್ತಿನಲ್ಲಿ ಉಲ್ಲೇಖಿಸಲಾಗಿದೆ.
ಕದನವಿರಾಮ ಕುರಿತು ನಿಗಾ ಇರಿಸಲು ಅಮೆರಿಕ ಅಧ್ಯಕ್ಷತೆಯ ಅಂತರರಾಷ್ಟ್ರೀಯ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ಹೇಳಲಾಗಿದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ದಾಳಿಗೆ ಲೆಬನಾನ್‌ನ 3,750 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.
ಕದನವಿರಾಮ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಇಸ್ರೇಲ್ ಹಾಗೂ ಹಿಜ್ಬುಲ್ಲಾ ತಮ್ಮ ದಾಳಿಗಳನ್ನು ಹೆಚ್ಚಿಸಿವೆ. ಹಿಜ್ಬುಲ್ಲಾ ಸಂಘಟನೆಯು ತನ್ನ ದೇಶದ ಮೇಲೆ 250 ಕಿರುಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳಿದೆ. ಇತ್ತ ಇಸ್ರೇಲ್ ಕೂಡ ಲೆಬನಾನ್ ಮೇಲೆ ಮಂಗಳವಾರ ತೀವ್ರ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಲೆಬನಾನ್‌ನ ದಕ್ಷಿಣ ಭಾಗದ ನಗರಗಳಲ್ಲಿರುವ 31 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.