ADVERTISEMENT

ಗಾಜಾ ಆಸ್ಪತ್ರೆಯ ನಿರ್ದೇಶಕನ ಬಿಡುಗಡೆ

ಇಸ್ರೇಲ್‌ ಸೇನೆಯಿಂದ ಚಿತ್ರಹಿಂಸೆ: ವೈದ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 15:14 IST
Last Updated 1 ಜುಲೈ 2024, 15:14 IST
<div class="paragraphs"><p>ಇಸ್ರೇಲ್ ದಾಳಿ</p></div>

ಇಸ್ರೇಲ್ ದಾಳಿ

   

ರಾಯಿಟರ್ಸ್ ಚಿತ್ರ

ಖಾನ್‌ ಯೂನಿಸ್‌ (ಗಾಜಾ ಪಟ್ಟಿ): ಗಾಜಾದ ಪ್ರಮುಖ ಆಸ್ಪತ್ರೆಯಾದ ‘ಶಿಫಾ ಆಸ್ಪತ್ರೆ’ಯ ನಿರ್ದೇಶಕ ಮೊಹಮ್ಮದ್‌ ಅಬು ಸೆಲ್ಮಿಯಾ ಅವರನ್ನು ವಶಕ್ಕೆ ತೆಗೆದುಕೊಂಡ ಏಳು ತಿಂಗಳ ನಂತರ ಇಸ್ರೇಲ್‌ ಸೇನೆಯು ಸೋಮವಾರ ಬಿಡುಗಡೆ ಮಾಡಿದೆ. 

ADVERTISEMENT

ಶಿಫಾ ಆಸ್ಪತ್ರೆಯು ಹಮಾಸ್‌ ಬಂಡುಕೋರರ ಅಡಗುತಾಣವಾಗಿದೆ ಎಂಬ ಅರೋಪದ ಮೇರೆಗೆ ಇಸ್ರೇಲ್‌ ಸೇನೆಯು ಕಳೆದ ವರ್ಷ ನವೆಂಬರ್‌ನಲ್ಲಿ ದಾಳಿ ನಡೆಸಿ, ಸೆಲ್ಮಿಯಾ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ಅವರನ್ನು ವಿಚಾರಣೆಗೆ ಒಳಪಡಿಸದೆ ಮತ್ತು ಅವರ ವಿರುದ್ಧ ಆರೋಪ ಹೊರಿಸದೆ ಬಿಡುಗಡೆಗೊಳಿಸಿರುವುದು ಸೇನೆಯು ಆಸ್ಪತ್ರೆಯ ಮೇಲೆ ಮಾಡಿದ್ದ ಆರೋಪದ ಕುರಿತು ಅನುಮಾನ ಮೂಡುವಂತೆ ಮಾಡಿದೆ.

ಸೇನೆಯ ವಶದಲ್ಲಿದ್ದ ವೇಳೆ ಅನುಭವಿಸಿದ್ದ ಸಂಕಷ್ಟಗಳ ಕುರಿತು ಮಾತನಾಡಿರುವ ಸೆಲ್ಮಿಯಾ, ‘ಸೆರೆಯಲ್ಲಿ ನಮಗೆ ಎಲ್ಲಾ ರೀತಿಯ ಚಿತ್ರಹಿಂಸೆ ನೀಡಲಾಯಿತು. ಬಂಧಿತರಿಗೆ ಮನಬಂದಂತೆ ಥಳಿಸಲಾಗುತ್ತಿತ್ತು. ಸೆರೆಮನೆಯ ಕಾವಲುಗಾರರು ನನ್ನ ಬೆರಳಿನ ಮೂಳೆ ಮುರಿದಿದ್ದರು ಮತ್ತು ತಲೆಗೆ ಬಲವಾಗಿ ಪೆಟ್ಟು ಮಾಡಿದ್ದರು. ಉತ್ತಮ ವೈದ್ಯಕೀಯ ನೆರವು ದೊರಕದೇ ಹಲವರ ಕೈ, ಕಾಲು ಊನಗೊಂಡಿವೆ’ ಎಂದರು.  

ವಿರೋಧ: ಸೆಲ್ಮಿಯಾ ಬಿಡುಗಡೆಗೆ ಇಸ್ರೇಲ್‌ನಲ್ಲಿ ವಿರೋಧವೂ ವ್ಯಕ್ತವಾಗಿದೆ. ಈ ನಡೆಯನ್ನು ಖಂಡಿಸಿರುವ ಅಲ್ಲಿಯ ಸರ್ಕಾರ ಇಬ್ಬರು ಸಚಿವರು, ಯಾರ ಅಭಿಪ್ರಾಯವನ್ನೂ ಕೇಳದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ. 

ಸೆಲ್ಮಿಯಾ ಅವರ ಬಿಡುಗಡೆಗೆ ಕಾರಣ ಮತ್ತು ಸೇನೆ ವಿರುದ್ಧ ಅವರು ಮಾಡಿರುವ ಆರೋಪದ ಕುರಿತು ಇಸ್ರೇಲ್‌ನ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವೆ ಯುದ್ಧ ಆರಂಭವಾದಾಗಿನಿಂದ ಗಾಜಾದಲ್ಲಿಯ ಹಲವಾರು ಆಸ್ಪತ್ರೆಗಳ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ ಅಥವಾ ಮುಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.