ಜೆರುಸಲೆಂ: ಕಳೆದ ವರ್ಷದ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯ ವೇಳೆ ಬಂದೂಕುಧಾರಿಯೊಬ್ಬ ಇಸ್ರೇಲ್‌ನ ಐವರು ಮಹಿಳಾ ಯೋಧರನ್ನು ಬಂಧಿಸಿರುವ ವಿಡಿಯೊ ದೃಶ್ಯಾವಳಿಗಳನ್ನು ಇಸ್ರೇಲ್ ಮಾಧ್ಯಮಗಳು ಬುಧವಾರ ಪ್ರಸಾರ ಮಾಡಿವೆ.
ಮೂರು ನಿಮಿಷಗಳ ವಿಡಿಯೊವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರವು ಇತರ ದೇಶಗಳ ಸಹಾಯವನ್ನು ಪಡೆಯುವ ನಿರೀಕ್ಷೆಯಲ್ಲಿದೆ. ಹಮಾಸ್ ತನ್ನ ಹೋರಾಟಗಾರರ ನಡೆಯನ್ನು ಸಮರ್ಥಿಸಿಕೊಂಡಿದ್ದು, ‘ಸಾರ್ವಜನಿಕರ ಅಭಿಪ್ರಾಯಗಳನ್ನು ಬದಲಾಯಿಸಲು ವಿಡಿಯೊವನ್ನು ಪ್ರಸಾರ ಮಾಡಲಾಗಿದೆ’ ಎಂದು ಹೇಳಿದೆ.
ದಿಗ್ಭ್ರಮೆಗೊಂಡಿರುವ ಹಾಗೂ ಮೈಮೇಲೆ ರಕ್ತ ಅಂಟಿಕೊಂಡಿರುವ ಯುವತಿಯರನ್ನು ಕಟ್ಟಿ ಹಾಕಿ ಜೀಪಿನಲ್ಲಿ ಕರೆದುಕೊಂಡು ಹೋಗುವ ದೃಶ್ಯಗಳು ಪ್ರಸಾರವಾಗಿವೆ.
‘ಈ ದೃಶ್ಯಗಳನ್ನು ನೋಡಿ. ಆ ಮಹಿಳೆಯರು ಇನ್ನೂ ಹಮಾಸ್‌ನ ಬಂಧನದಲ್ಲಿದ್ದಾರೆ. ಅವರನ್ನು ಮರಳಿ ಕರೆತರಲು ಇಸ್ರೇಲ್‌ಗೆ ಸಹಾಯ ಮಾಡಿ’ ಎಂದು ಇಸ್ರೇಲ್ ಸರ್ಕಾರದ ವಕ್ತಾರ ಡೇವಿಡ್ ಮೆನ್ಸೆರ್ ತಿಳಿಸಿದ್ದಾರೆ.
ಹಮಾಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮತ್ತು ಒತ್ತೆಯಾಳುಗಳನ್ನು ಕರೆತರಲು ಪ್ರಯತ್ನಿಸುವಂತೆ ಬಂಧಿತರ ಪೋಷಕರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ.
ಬಂಧಿತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಹಮಾಸ್, ‘ನಮ್ಮ ಸೈನಿಕರು ಬಂಧಿತರ ಜೊತೆ ಅನೈತಿಕವಾಗಿ ವರ್ತಿಸಿಲ್ಲ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.