ಜೆರುಸಲೇಂ: ಭಾರೀ ಪ್ರಮಾಣದ ವಾಯುದಾಳಿ ನಡೆಸಿದ ಬಳಿಕ ಗಾಜಾಪಟ್ಟಿಯನ್ನು ಇಬ್ಭಾಗ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಗಾಜಾ ಪಟ್ಟಿ ಮೇಲಿನ ಹಮಾಸ್ ಬಂಡುಕೋರರ ಹಿಡಿತವನ್ನು ಸಡಿಲಗೊಳಿಸಲು ಹೀಗೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿರುವ, ಭಾರಿ ಜನನಿಬಿಡ ಪ್ರದೇಶ ಗಾಜಾ ನಗರವನ್ನು ಇಸ್ರೇಲ್ ಸೇನೆಯ ಎರಡು ತುಕಡಿಗಳು ಸುತ್ತುವರಿದಿದೆ. ಇದು ಗಾಜಾದ ದಕ್ಷಿಣ ಭಾಗವನ್ನು ಬೇರ್ಪಡಿಸಿದೆ.
‘ಇಂದು ಉತ್ತರ ಹಾಗೂ ದಕ್ಷಿಣ ಗಾಜಾ ಇದೆ’ ಎಂದು ಇಸ್ರೇಲ್ ಸೇನೆಯ ಮುಖ್ಯ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗಾರಿ ತಿಳಿಸಿದ್ದಾರೆ.
ಆದರೆ ಗಾಜಾ ಪಟ್ಟಿಯನ್ನು ಇಬ್ಭಾಗ ಮಾಡುವ ಅಥವಾ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯಾವುದೇ ಹೇಳಿಕೆಗಳು ಇಸ್ರೇಲ್ ನಾಯಕರಿಂದ ಬಂದಿಲ್ಲ.
ಗಾಜಾದಲ್ಲಿ ದೂರಸಂಪರ್ಕ ಕಡಿತಗೊಂಡಿದ್ದರಿಂದ ಯುದ್ಧದ ವ್ಯಾಪ್ತಿ ಎಷ್ಟಿದೆ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಗಾಜಾದ 450 ಕಡೆಗಳಲ್ಲಿ ರಾತ್ರೋರಾತ್ರಿ ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಚ್ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ಪ್ರಾರಂಭವಾದ ಈ ಸಮರದಲ್ಲಿ ಗಾಜಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.