ಖಾನ್ ಯೂನಿಸ್/ ಜೆರುಸಲೇಂ: ಗಾಜಾ ಪಟ್ಟಿಯ ಅಲ್ ಶಿಫಾ ಆಸ್ಪತ್ರೆಯಲ್ಲಿ ಎರಡನೇ ದಿನವಾದ ಗುರುವಾರವೂ ಹಮಾಸ್ ಬಂಡುಕೋರರ ನೆಲೆಯ ಪತ್ತೆಗಾಗಿ, ಇಸ್ರೇಲ್ ಸೇನಾ ಯೋಧರಿಂದ ದಾಳಿ ಮುಂದುವರಿಯಿತು.
ಆದರೆ, ಆಸ್ಪತ್ರೆಯಲ್ಲಿ ಹಮಾಸ್‌ನ ಕಮಾಂಡೊ ನೆಲೆ ಇದೆ ಎಂಬ ಬಗ್ಗೆ ಸೇನೆಯು ಯಾವುದೇ ಪುರಾವೆಯನ್ನು ಬಹಿರಂಗಪಡಿಸಿಲ್ಲ.
ಯೋಧರ ಈ ಕಾರ್ಯಾಚರಣೆಯಿಂದ ವಿದ್ಯುತ್ ಸೇರಿದಂತೆ ಅಗತ್ಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ನವಜಾತ ಶಿಶುಗಳು ಸೇರಿದಂತೆ ನೂರಾರು ರೋಗಿಗಳು ಮತ್ತಷ್ಟು ನರಳುವಂತಾಗಿದೆ.
ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಯೋಧರು ಶೋಧ ಕಾರ್ಯ ನಡೆಸಿದರು. ವೈದ್ಯಕೀಯ ಯಂತ್ರೋಪಕರಣಗಳ ಉಸ್ತುವಾರಿ ಹೊತ್ತಿರುವ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ಹೇಳಿದೆ.
‘ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಕೆಲವು ಗಂಟೆಗಳ ಕಾಲ ಶೋಧ ನಡೆಸಿದರು. ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಆಶ್ರಯ ಪಡೆದಿರುವ ಜನರನ್ನು ವಿಚಾರಣೆ ನಡೆಸಿದರು’ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಮುನೀರ್ ಅಲ್ ಬೋರ್ಷ್ ತಿಳಿಸಿದ್ದಾರೆ.
ಆದರೆ, ದಾಳಿ ವೇಳೆ ಇಸ್ರೇಲ್ ಆರೋಪಿಸಿದಂತೆ ಹಮಾಸ್ ನಿರ್ಮಿಸಿರುವ ಸುರಂಗ ಇರುವುದು ಪತ್ತೆಯಾಗಿಲ್ಲ. ಆದರೆ, ಎಂಆರ್‌ಐ ಪ್ರಯೋಗಾಲಯದಲ್ಲಿ ಮೂರು ಚೀಲಗಳು ದೊರೆತಿರುವುದಾಗಿ ಸೇನೆಯು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಲಾಗಿದೆ.
ಈ ಚೀಲಗಳಲ್ಲಿ ರೈಫಲ್‌ಗಳು, ಗ್ರೆನೇಡ್‌ಗಳು ಹಾಗೂ ಬಂಡುಕೋರರ ಸಮವಸ್ತ್ರಗಳು ಇರುವುದು ಪತ್ತೆಯಾಗಿದೆ ಎಂದು ಹೇಳಿದೆ. ಆದರೆ, ಈ ಆರೋಪವನ್ನು ಖುದ್ದಾಗಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ ಎಂದು ಎಪಿ ಸುದ್ದಿಸಂಸ್ಥೆ ಸ್ಪಷ್ಟಪಡಿಸಿದೆ.
ಶಿಫಾ ಆಸ್ಪತ್ರೆಯನ್ನು ಬಂಡುಕೋರರು ತಮ್ಮ ಕಾರ್ಯಾಚರಣೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪವನ್ನು ಆರೋಗ್ಯ ಸಚಿವಾಲಯ ಅಲ್ಲಗಳೆದಿದೆ. 500 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 1,500 ವೈದ್ಯಕೀಯ ಸಿಬ್ಬಂದಿ ಇದ್ದಾರೆ.
ಈ ನಡುವೆಯೇ ದಕ್ಷಿಣ ಗಾಜಾ ಪಟ್ಟಿಯಲ್ಲಿ ನೆಲೆಸಿರುವ ಜನರನ್ನು ಬೇರೆಡೆಗೆ ತೆರಳುವಂತೆ ಸೇನೆಯು ಕರಪತ್ರಗಳ ಮೂಲಕ ಎಚ್ಚರಿಕೆಯ ಸಂದೇಶ ನೀಡಿದೆ. ಹಾಗಾಗಿ, ವಿಶ್ವಸಂಸ್ಥೆಯ ಶಿಬಿರಗಳು ಮತ್ತು ಮನೆಗಳಲ್ಲಿ ನೆಲೆಸಿರುವ ನೂರಾರು ಜನರು ಆತಂಕಗೊಂಡಿದ್ದಾರೆ.
ಯುದ್ಧದಲ್ಲಿ 51 ಯೋಧರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಇಲ್ಲಿಯವರೆಗೆ 11,500 ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.