ದೇರ್ ಅಲ್ ಬಲಾಹ್ (ಗಾಜಾ ಪಟ್ಟಿ): ಇಸ್ರೇಲ್ ಪಡೆಗಳು ಹಮಾಸ್ ಬಂಡುಕೋರರನ್ನು ಗುರಿಯಾಗಿಸಿ ಭಾನುವಾರ ನಸುಕಿನಲ್ಲಿ ಗಾಜಾಪಟ್ಟಿಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆ ಮತ್ತು ಆಕೆಯ ಆರು ಮಕ್ಕಳು ಸೇರಿ 19 ಜನರು ಮೃತಪಟ್ಟಿದ್ದಾರೆ.
ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಪ್ರಕಾರ, ದೇರ್ ಅಲ್-ಬಾಲಾಹ್‌ನಲ್ಲಿರುವ ಮನೆಯೊಂದರ ಮೇಲೆ ಭಾನುವಾರ ನಸುಕಿನಲ್ಲಿ ಇಸ್ರೇಲ್ ಪಡೆಗಳು ಬಾಂಬ್ ದಾಳಿ ನಡೆಸಿವೆ. ಇದರಿಂದ ಮಹಿಳೆ ಮತ್ತು ಆಕೆಯ ಆರು ಮಕ್ಕಳು ಹತರಾಗಿದ್ದಾರೆ. ಈ ಮಕ್ಕಳೆಲ್ಲರೂ 18 ತಿಂಗಳಿಂದ 15 ವರ್ಷದೊಳಗಿನವರು.
ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಉತ್ತರದ ಪಟ್ಟಣ ಜಬಾಲಿಯಾದಲ್ಲಿ ವಸತಿ ಕಟ್ಟಡದಲ್ಲಿನ ಎರಡು ಅಪಾರ್ಟ್‌ಮೆಂಟ್‌ಗಳಿಗೆ ಬಾಂಬ್ ಅಪ್ಪಳಿಸಿ, ಇಬ್ಬರು ಪುರುಷರು, ಮಹಿಳೆ ಮತ್ತು ಆಕೆಯ ಮಗಳು ಸತ್ತಿದ್ದಾರೆ.
ಅವ್ಡಾ ಆಸ್ಪತ್ರೆಯ ಪ್ರಕಾರ, ಸೆಂಟ್ರಲ್ ಗಾಜಾದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಶನಿವಾರ ತಡ ರಾತ್ರಿ ದಕ್ಷಿಣ ನಗರ ಖಾನ್ ಯೂನಿಸ್ ಬಳಿ ನಡೆದ ವಾಯು ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ ಒಂದೇ ಕುಟುಂಬದ ನಾಲ್ವರು ಸತ್ತಿದ್ದಾರೆ ಎಂದು ನಾಸರ್ ಆಸ್ಪತ್ರೆ ತಿಳಿಸಿದೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು, ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಯ ನಂತರ ಕದನ ವಿರಾಮ ಒಪ್ಪಂದಕ್ಕೆ ಉಭಯತ್ರರು ಬರುವಂತೆ ಮಾಡುವ ಪ್ರಯತ್ನದ ಭಾಗವಾಗಿ ಈ ಪ್ರದೇಶಕ್ಕೆ ಭಾನುವಾರ ಪ್ರಯಾಣ ಕೈಗೊಂಡರು.
ಹೆಚ್ಚಿನ ಮಾತುಕತೆಗಾಗಿ ಇಸ್ರೇಲ್ ಪ್ರತಿನಿಧಿಗಳ ನಿಯೋಗವು ಈಜಿಪ್ಟ್ ರಾಜಧಾನಿ ಕೈರೊಗೆ ಪ್ರಯಾಣಿಸಲು ಸಿದ್ಧವಾಗಿದೆ. ಇನ್ನು ಬ್ಲಿಂಕನ್ ಅವರು ಸೋಮವಾರ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಅಮೆರಿಕ, ಇತರ ಮಧ್ಯಸ್ಥಿಕೆ ದೇಶಗಳಾದ ಈಜಿಪ್ಟ್ ಮತ್ತು ಕತಾರ್ ಪ್ರತಿನಿಧಿಗಳು, ದೋಹಾದಲ್ಲಿ ಎರಡು ದಿನಗಳ ಮಾತುಕತೆಯ ನಂತರ ಒಪ್ಪಂದಕ್ಕೆ ಬರಲಾಗುತ್ತದೆ ಎಂದು ಹೇಳಿದರು.
ಹಮಾಸ್ ಒಪ್ಪಂದಕ್ಕೆ ಬರಬಹುದೆನ್ನುವ ಆಶಾವಾದವನ್ನು ಅಮೆರಿಕ ಮತ್ತು ಇಸ್ರೇಲ್ ವ್ಯಕ್ತಪಡಿಸಿವೆ. ಆದರೆ, ಇಸ್ರೇಲ್‌ನ ಹೊಸ ಬೇಡಿಕೆಗಳಿಗೆ ಹಮಾಸ್ ಪ್ರತಿರೋಧ ವ್ಯಕ್ತಪಡಿಸಿದೆ.
ಸದ್ಯದ ಮಾತುಕತೆಯಂತೆ ಕದನ ವಿರಾಮ ಒಪ್ಪಂದ ಮೂರು ಹಂತದ ಪ್ರಕ್ರಿಯೆಗಳಾಗಿ ಕಾರ್ಯರೂಪಕ್ಕೆ ಬರಲಿದ್ದು, ಅದರ ಪ್ರಕಾರ, ಹಮಾಸ್ ಅಕ್ಟೋಬರ್ 7ರ ದಾಳಿಯ ಸಮಯದಲ್ಲಿ ಅಪಹರಿಸಲ್ಪಟ್ಟ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ತನ್ನ ಪಡೆಗಳನ್ನು ಗಾಜಾದಿಂದ ಹಿಂತೆಗೆದುಕೊಳ್ಳಬೇಕು ಮತ್ತು ಪ್ಯಾಲೆಸ್ಟೀನಿನ ಕೈದಿಗಳನ್ನು ಬಿಡುಗಡೆ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.