ಬೈರೂತ್ : ಬೈರೂತ್‌ನ ಕೇಂದ್ರ ಭಾಗದಲ್ಲಿ ಇರುವ ಅಪಾರ್ಟ್‌ಮೆಂಟ್ ಕಟ್ಟಡವೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಜೊತೆ ನಂಟು ಹೊಂದಿದ್ದ 9 ಮಂದಿ ಹತರಾಗಿದ್ದಾರೆ.
ಹಿಜ್ಬುಲ್ಲಾ ಸಂಘಟನೆಯು ಬಲಿಷ್ಠವಾಗಿರುವ ಪ್ರದೇಶಗಳ ಮೇಲೆ ಇಸ್ರೇಲ್ ಪಡೆಗಳು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಿಂದ ದಾಳಿ ನಡೆಸುತ್ತಿವೆ. ಆದರೆ, ನಗರದ ಕೇಂದ್ರ ಭಾಗದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಅಪರೂಪ.
ಬುಧವಾರ ರಾತ್ರಿ ನಡೆದ ಈ ದಾಳಿಗೆ ಮೊದಲು ಯಾವುದೇ ಎಚ್ಚರಿಕೆಯ ಸಂದೇಶ ನೀಡಿರಲಿಲ್ಲ. ವಿಶ್ವಸಂಸ್ಥೆಯ ಮುಖ್ಯ ಕಚೇರಿ, ಪ್ರಧಾನಿಯವರ ಕಚೇರಿ ಹಾಗೂ ಸಂಸತ್ತಿನ ಸನಿಹದಲ್ಲೇ ಇರುವ ಕಟ್ಟಡದ ಮೇಲೆ ಈ ದಾಳಿ ನಡೆದಿದೆ. ತನ್ನ 9 ಮಂದಿ ಕಾರ್ಯಕರ್ತರು ದಾಳಿಗೆ ಬಲಿಯಾಗಿದ್ದಾರೆ ಎಂದು ಹಿಜ್ಬುಲ್ಲಾ ಸಂಘಟನೆಯ ನಾಗರಿಕ ರಕ್ಷಣಾ ವಿಭಾಗ ಹೇಳಿದೆ.
ನಾಲ್ಕು ಮಂದಿ ಅರೆವೈದ್ಯಕೀಯ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಲೆಬನಾನ್‌ನ ರೆಡ್‌ಕ್ರಾಸ್ ಸಂಸ್ಥೆ ಹೇಳಿದೆ. ಲೆಬನಾನ್‌ನ ಸೈನಿಕನೊಬ್ಬ ದಾಳಿಗೆ ಬಲಿಯಾಗಿದ್ದಾನೆ.
ಇನ್ನೊಂದು ಬೆಳವಣಿಗೆಯಲ್ಲಿ ಇಸ್ರೇಲ್ ಮಿಲಿಟರಿಯು ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಇರುವ ಗ್ರಾಮಗಳು ಹಾಗೂ ಪಟ್ಟಣಗಳ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದೆ. ಈ ಗ್ರಾಮಗಳು ಹಾಗೂ ಪಟ್ಟಣಗಳು ವಿಶ್ವಸಂಸ್ಥೆ ಗುರುತಿಸಿರುವ ಬಫರ್ ವಲಯದ ಉತ್ತರಕ್ಕಿವೆ. ಮಿಲಿಟರಿಯ ಈ ಸೂಚನೆಯು, ಇಸ್ರೇಲ್‌ನ ಕಾರ್ಯಾಚರಣೆಯು ಇನ್ನಷ್ಟು ವಿಸ್ತರಿಸಬಹುದು ಎಂಬ ಸುಳಿವನ್ನು ನೀಡಿದೆ. ಇಸ್ರೇಲ್ ಸೇನೆಯು ಇದುವರೆಗೆ ಗಡಿ ಪ್ರದೇಶಕ್ಕೆ ಸನಿಹದಲ್ಲಿ ಇರುವ ಸ್ಥಳಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿತ್ತು.
ಇರಾನ್ ಬೆಂಬಲಿಯ ಹುಥಿ ಬಂಡುಕೋರರು ತಾವು ಇಸ್ರೇಲ್ ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ. ಒಂದು ಡ್ರೋನ್‌ಅನ್ನು ಹೊಡೆದುರುಳಿಸಲಾಗಿದೆ, ಇನ್ನೊಂದು ಡ್ರೋನ್ ಮೆಡಿಟರೇನಿಯನ್ ಸಮುದ್ರದಲ್ಲಿ ಬಿದ್ದಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಹಿಜ್ಬುಲ್ಲಾ ಸಂಘಟನೆಯು ಬಲಿಷ್ಠವಾಗಿರುವ ಪ್ರದೇಶಗಳ ಮೇಲೆ ಇಸ್ರೇಲ್ ಪಡೆಗಳು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಿಂದ ದಾಳಿ ನಡೆಸುತ್ತಿವೆ. ಆದರೆ, ನಗರದ ಕೇಂದ್ರ ಭಾಗದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಅಪರೂಪ.
ಹಮಾಸ್ ನಾಯಕ ಹತ
ಜೆರುಸಲೇಂ: ಹಮಾಸ್ ಬಂಡುಕೋರ ಸಂಘಟನೆಯ ಹಿರಿಯ ನಾಯಕರೊಬ್ಬರನ್ನು ಮೂರು ತಿಂಗಳ ಹಿಂದೆ ಗಾಜಾ ಪಟ್ಟಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಗುರುವಾರ ಹೇಳಿದೆ. ಭೂಗತ ಸ್ಥಳವೊಂದರ ಮೇಲೆ ನಡೆಸಿದ ದಾಳಿಯಲ್ಲಿ ರಾವ್ಹಿ ಮುಶ್ತಾಹಾ ಅವರು ಮೃತಪಟ್ಟಿದ್ದಾರೆ.
ಅಲ್ಲದೆ ಇಬ್ಬರು ಕಮಾಂಡರ್‌ಗಳಾದ ಸಮೇಹ್ ಸಿರಾಜ್ ಮತ್ತು ಸಮೇಹ್ ಔದೇಹ್ ಅವರೂ ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಹಮಾಸ್ ಸಂಘಟನೆಯ ಪ್ರಮುಖ ನಾಯಕ ಯಾಹ್ಯಾ ಸಿನ್ವರ್ ಅವರ ಆಪ್ತ ಮುಶ್ತಾಹಾ. ಯಾಹ್ಯಾ ಅವರು ಗಾಜಾದಲ್ಲಿ ಅಡಗಿದ್ದಾರೆ ಎನ್ನಲಾಗಿದೆ.
ಇರಾನ್ ಮೇಲೆ ದಾಳಿ ಬಗ್ಗೆ ಚರ್ಚೆ: ಬೈಡನ್
ವಾಷಿಂಗ್ಟನ್: ಇರಾನ್ ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಲು ಇಸ್ರೇಲ್ ಮುಂದಾಗಿದೆ.
ಅಧ್ಯಕ್ಷ ಬೈಡನ್ ಅವರ ಹೇಳಿಕೆ ಪ್ರಸಾರವಾದ ಕೆಲವೇ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 5ರಷ್ಟು ಏರಿಕೆ ಕಂಡುಬಂದಿದೆ. ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ಸಂದರ್ಭದಲ್ಲಿ ಬೈಡನ್ ಈ ಮಾತು ಹೇಳಿದ್ದಾರೆ.
ಇರಾನ್ ವಿರುದ್ಧ ಪ್ರತಿದಾಳಿ ನಡೆಸಲು ಇಸ್ರೇಲ್‌ಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಬೈಡನ್ ಅವರು ‘ನಾವು ಅವಕಾಶ ಕೊಡುವಂಥದ್ದು ಇಲ್ಲ ನಾವು ಇಸ್ರೇಲ್‌ಗೆ ಸಲಹೆ ನೀಡುತ್ತೇವೆ. ಗುರುವಾರ ಏನೂ ಆಗುವುದಿಲ್ಲ’ ಎಂದು ಉತ್ತರಿಸಿದ್ದಾರೆ. ಇರಾನ್‌ನ ಅಣ್ವಸ್ತ್ರ ಯೋಜನೆಗಳ ಸ್ಥಳಗಳ ಮೇಲೆ ಇಸ್ರೇಲ್ ದಾಳಿ ನಡೆಸುವುದನ್ನು ಅಮೆರಿಕ ಬೆಂಬಲಿಸುವುದಿಲ್ಲ ಎಂದು ಬೈಡನ್ ಅವರು ಬುಧವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.