ADVERTISEMENT

ಸಿರಿಯಾದ ತಹ್ರೀರ್–ಅಲ್ ಶಾಮ್‌ ನಿಯಂತ್ರಣದ ಸ್ಥಳಗಳ ಮೇಲೆ ಇಸ್ರೇಲ್ ದಾಳಿ: 10 ಸಾವು

ಏಜೆನ್ಸೀಸ್
Published 17 ಅಕ್ಟೋಬರ್ 2024, 4:00 IST
Last Updated 17 ಅಕ್ಟೋಬರ್ 2024, 4:00 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೈರೂತ್‌: ಸುನ್ನಿ ಇಸ್ಲಾಮಿಕ್ ಶಸ್ತ್ರಾಸ್ತ್ರ ‍‍ಪಡೆ ಹಯಾತ್ ತಹ್ರೀರ್–ಅಲ್ ಶಾಮ್‌ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದ ಇದ್ಲಿಬ್‌ ನಗರದ ಮೇಲೆ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 10 ಮಂದಿ ಅಸುನೀಗಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಕಣ್ಗಾವಲು ಸಂಸ್ಥೆ ತಿಳಿಸಿದೆ.

ADVERTISEMENT

‘ಇದ್ಲಿಬ್‌ನಲ್ಲಿ ನಡೆದ ರಷ್ಯಾದ ವಾಯುದಾಳಿಯಲ್ಲಿ ಒಂದು ಮಗು ಸೇರಿ 10 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಗಾಯಗೊಂಡವರಲ್ಲಿ 14 ಮಂದಿ ಮಕ್ಕಳು ಸೇರಿದ್ದಾರೆ ’ ಎಂದು ಸಿರಿಯಾದ ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆ ತಿಳಿಸಿದೆ.

ಇದ್ಲಿಬ್‌ ನಗರದ ಹೊರವಲಯದಲ್ಲಿರುವ ಒಂದು ಗರಗಸ, ಪೀಠೋಪಕರಣ ಹಾಗೂ ಆಲಿವ್ ಎಣ್ಣೆ ಕಾರ್ಖಾನೆಯನ್ನು ಗುರಿಯಾಗಿಸಿ ದಾಳಿ ನಡೆದಿದೆ.

ದಾಳಿಯಿಂದಾಗಿ ಮೃತಪಟ್ಟವರ ದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಸಿರಿಯಾದ ನಾಗರಿಕ ರಕ್ಷಣಾ ಪಡೆ ‘ವೈಟ್ ಹೆಲ್ಮೆಟ್ಸ್’ ತಿಳಿಸಿದೆ.

‘ದಾಳಿಯ ವೇಳೆ ಕಾರ್ಮಿಕರೆಲ್ಲರೂ ಕೆಲಸನಿರತರಾಗಿದ್ದರು. ಘಟನೆಯಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ, 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ನಾಗರಿಕ ರಕ್ಷಣಾ ಪಡೆ ತಿಳಿಸಿದೆ.

ರಷ್ಯಾ ಹಾಗೂ ಸಿರಿಯಾ ನಡುವೆ ಉತ್ತಮ ರಾಜತಾಂತ್ರಿಕ ಬಾಂಧ್ಯವಿದ್ದು, ತಹ್ರೀರ್–ಅಲ್ ಶಾಮ್‌ ನಿಯಂತ್ರದಲ್ಲಿರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸಿರಿಯಾ ಹಾಗೂ ರಷ್ಯಾ ಜಂಟಿ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಹಲವು ಅರಬ್ ಮಾಧ್ಯಮಗಳು ವರದಿ ಮಾಡಿವೆ.

ಇದ್ಲಿಬ್ ನಗರದ ಮೇಲಿನ ದಾಳಿಯ ಬಗ್ಗೆ ರಷ್ಯಾ ಅಥವಾ ಸಿರಿಯಾ ಅಧ್ಯಕ್ಷ ಬಷರ್ ಅಲ್–ಅಸ್ಸಾದ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.