ADVERTISEMENT

ಇರಾನ್‌ ಮೇಲಿನ ನಿರ್ಬಂಧ ಸಡಿಲಿಸಬೇಡಿ–ಇಸ್ರೇಲ್‌ ಎಚ್ಚರಿಕೆ

ಪಿಟಿಐ
Published 18 ಜನವರಿ 2022, 14:37 IST
Last Updated 18 ಜನವರಿ 2022, 14:37 IST
ನಫ್ತಾಲಿ ಬೆನೆಟ್‌
ನಫ್ತಾಲಿ ಬೆನೆಟ್‌   

ನವದೆಹಲಿ/ದಾವೋಸ್‌:ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸುವುದರ ವಿರುದ್ಧ ಎಚ್ಚರಿಕೆ ನೀಡಿರುವ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, ‘ಇರಾನ್‌ ಭಯೋತ್ಪಾದನೆಯ ಅಕ್ಟೋಪಸ್‌ ಆಗಿದ್ದು, ಅಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಿದ್ದೇ ಆದರೆ ಉದ್ದೀಪನ ಔಷಧದ ಮೂಲಕವೂ ಭಯೋತ್ಪಾದನೆಯನ್ನು ಛೂಬಿಡುವ ಸನ್ನಿವೇಶ ಸೃಷ್ಟಿಯಾಗಬಹುದು’ ಎಂದು ಹೇಳಿದ್ದಾರೆ.‌

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವರ್ಚುವಲ್‌ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಇಸ್ರೇಲ್‌ಗೆ ಬಂದು ಹೂಡಿಕೆ ಮಾಡಲು ವಿಶ್ವ ನಾಯಕರಿಗೆ ಆಹ್ವಾನ ನೀಡಿದರು.‌

‘ಇರಾನ್‌ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಕೆಲವು ವಲಯಗಳಿಂದ ಮಾತುಗಳು ಕೇಳಿಬರುತ್ತಿವೆ. ಇರಾನ್‌ ಎಂಬುದು ಭಯೋತ್ಪಾದನೆ ಮತ್ತು ಅಸ್ಥಿರತೆಯ ಅಕ್ಟೋಪಸ್‌ ಆಗಿದ್ದು, ಅದರ ಶಿರ ಟೆಹರಾನ್‌ನಲ್ಲಿದ್ದರೆ, ಬಾಹುಗಳು ಮಧ್ಯಪ್ರಾಚ್ಯದ ಎಲ್ಲಾ ದೇಶಗಳನ್ನು ಚಾಚಿಕೊಂಡಿವೆ. ಇರಾನ್‌ನೊಂದಿಗೆ ಸ್ನೇಹ ಸಾಧಿಸಿದ ಪ್ರತಿಯೊಂದು ದೇಶವೂ ವಿಫಲವಾಗಿದೆ, ಏಕೆಂದರೆ ತನ್ನ ಮಿತ್ರ ರಾಷ್ಟ್ರಗಳಲ್ಲೂ ಅದು ಪರೋಕ್ಷ ರೀತಿಯಿಂದ ಭಯೋತ್ಪಾದನೆಯನ್ನು ಛೂಬಿಟ್ಟಿರುತ್ತದೆ. ಒಂದು ವೇಳೆ ಇರಾನ್‌ನಲ್ಲಿ ಹೂಡಿಕೆಗೆ ಅವಕಾಶ ನೀಡಿ, ಬಿಲಿಯನ್‌ ಡಾಲರ್‌ ಅನ್ನು ಅಲ್ಲಿ ಸುರಿದರೆ ಉದ್ದೀಪನ ಔಷಧದಲ್ಲೂ ನೀವು ಭಯೋತ್ಪಾದನೆಯನ್ನೇ ಪಡೆಯುತ್ತೀರಿ. ಪ್ರತಿಯೊಂದೂ ಅಲ್ಲಿ ದುಪ್ಪಟ್ಟು, ಮೂರು ಪಟ್ಟು ಹೆಚ್ಚಾಗಿರುತ್ತದೆ’ ಎಂದು ಪ್ರಧಾನಿ ಬೆನೆಟ್‌ ಅಭಿಪ್ರಾಯಪಟ್ಟರು.

ADVERTISEMENT

‘ಇರಾನ್‌ ಅಣ್ವಸ್ತ್ರ ಹೊಂದುವುದಕ್ಕೆ ಜಗತ್ತು ಅವಕಾಶ ನೀಡಬಾರದು. ನಾನೂ ಮೂಲತಃ ಒಬ್ಬ ಉದ್ಯಮಿಯೇ. ಇರಾನ್‌ನೊಂದಿಗೆ ವಹಿವಾಟು ಇದೆಯೋ, ಇಲ್ಲವೋ, ಅಲ್ಲಿ ಹೂಡಿಕೆ ಮಾಡುವುದಂತೂ ಆರೋಗ್ಯಕರ ವ್ಯವಹಾರವಲ್ಲ’ ಎಂದು ಅವರು ಪ್ರತಿಪಾದಿಸಿದರು.

ಕೋವಿಡ್ ಬಗ್ಗೆ ಮಾತನಾಡಿದ ಅವರು, ‘ಕೋವಿಡ್‌ ವಿಚಾರದಲ್ಲಿ ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದು ಬಹಳ ಮುಖ್ಯ. ಈ ಪಿಡುಗು ಔಷಧ, ಲಸಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ. ಸಮಾಜ, ಆರ್ಥಿಕತೆ, ಶಿಕ್ಷಣ, ಸಾರಿಗೆ ಸಹಿತ ಹಲವಾರು ವಿಚಾರಗಳ ಮೇಲೂ ಕೊರೊನಾ ಪಿಡುಗಿನ ಪ್ರಭಾವ ಇದೆ. ಹೀಗಾಗಿ ನಿರ್ಧಾರ ಕೈಗೊಳ್ಳುವಲ್ಲಿ ನಿಧಾನಗತಿ ತೋರಿಸಿದರೆ ದೇಶ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.