ADVERTISEMENT

ಹಮಾಸ್ ನಾಶವಾಗುವವರೆಗೂ ಇಸ್ರೇಲ್ ಯುದ್ಧ ನಿಲ್ಲಿಸುವುದಿಲ್ಲ: ಬೆಂಜಮಿನ್‌ ನೆತನ್ಯಾಹು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2023, 10:25 IST
Last Updated 17 ಅಕ್ಟೋಬರ್ 2023, 10:25 IST
ಬೆಂಜಮಿನ್‌ ನೆತನ್ಯಾಹು
ಬೆಂಜಮಿನ್‌ ನೆತನ್ಯಾಹು   

ಜೆರುಸಲೇಂ: ಹಮಾಸ್‌ ಬಂಡುಕೋರರು ನಾಶವಾಗುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇಂದು (ಮಂಗಳವಾರ) ಪುನರುಚ್ಚರಿಸಿದ್ದಾರೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಬೆಂಜಮಿನ್‌ ನೆತನ್ಯಾಹು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಉಭಯ ನಾಯಕರ ಸಂಭಾಷಣೆಯ ವಿವರಗಳನ್ನು ನೆತನ್ಯಾಹು ಅವರ ಕಚೇರಿ ಹಂಚಿಕೊಂಡಿದೆ.

ಅಕ್ಟೋಬರ್ 7ರಂದು ಹಮಾಸ್‌ ಬಂಡುಕೋರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ADVERTISEMENT

ಹಮಾಸ್‌ ಬಂಡುಕೋರರು ಇಸ್ರೇಲ್ ಮೇಲೆ ಕ್ರೂರ ಮತ್ತು ಅಸಹ್ಯಕರ ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೃಢನಿಶ್ಚಯ ಮತ್ತು ಒಗ್ಗಟ್ಟಿನಿಂದ ನಾವು ಯುದ್ಧ ಸಾರಿದ್ದೇವೆ. ಹಮಾಸ್‌ನ ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸುವವರೆಗೂ ನಾವು ಯುದ್ಧವನ್ನು ನಿಲ್ಲುವುದಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ’ ಎಂದು ಇಸ್ರೇಲ್ ಪ್ರಧಾನಿ ಕಚೇರಿ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ.

ಇಸ್ರೇಲಿ ಪಡೆಗಳು ಹಮಾಸ್ ಅನ್ನು ನಿರ್ಮೂಲನೆ ಮಾಡುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂದು ನೆತನ್ಯಾಹು ಅವರು ಪುಟಿನ್‌ಗೆ ವಿವರಿಸಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತಷ್ಟು ಉಲ್ಬಣಗೊಳಿಸುವುದನ್ನು ತಡೆಯಲು ರಷ್ಯಾ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನೆತನ್ಯಾಹು ಅವರಿಗೆ ಪುಟಿನ್ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.