ADVERTISEMENT

ರಫಾದಲ್ಲಿ ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ವಾಯುದಾಳಿ: 45 ಮಂದಿ ಸಾವು

ರಾಯಿಟರ್ಸ್
Published 28 ಮೇ 2024, 3:08 IST
Last Updated 28 ಮೇ 2024, 3:08 IST
   

ದೇರ್‌ ಅಲ್ ಬಲಾಹ್‌ (ಗಾಜಾ ಪಟ್ಟಿ): ಗಾಜಾದ ದಕ್ಷಿಣ ಭಾಗದ ರಫಾ ನಗರದಲ್ಲಿರುವ ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಕನಿಷ್ಠ 45 ಜನ ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ದಾಳಿಯಲ್ಲಿ 23 ಮಂದಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕನಿಷ್ಠ 45 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. 200 ಜನರು ಗಾಯಗೊಂಡಿದ್ದಾರೆ.

ಸ್ಥಳಾಂತರಗೊಂಡ ಕುಟುಂಬಗಳು ವಾಸಿಸುವ ಜನನಿಬಿಡ ಪ್ರದೇಶದ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ದಾಳಿಯಿಂದ ಪ್ಲಾಸ್ಟಿಕ್ ಮತ್ತು ತಗಡಿನಿಂದ ಮಾಡಲಾದ ಡೇರೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. ಹೊತ್ತಿ ಉರಿಯುತ್ತಿರುವ ಅವಶೇಷಗಳ ನಡುವೆ ಹಲವರು ಸಿಲುಕಿಕೊಂಡಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಈವರೆಗೆ ಒಟ್ಟು 36,050 ಜನ ಮೃತಪಟ್ಟಿದ್ದಾರೆ. 81,026 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ದಾಳಿ ಖಂಡಿಸಿದ ಗುಟೆರಸ್:

ರಫಾದ ಮೇಲಿನ ಇಸ್ರೇಲ್‌ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಖಂಡಿಸಿದ್ದಾರೆ. ಭಯಾನಕ ಘಟನೆಯಲ್ಲಿ ಹಲವು ಮುಗ್ಧ ನಾಗರಿಕರು ಸಾವಿಗೀಡಾಗಿದ್ದಾರೆ. ಇಂತಹ ಕೃತ್ಯ ನಿಲ್ಲಬೇಕು ಎಂದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಗುಟೆರೆಸ್, 'ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಹಮಾಸ್‌ ಇಸ್ರೇಲ್‌ ಸಂಘರ್ಷದಿಂದ ನಿರಾಶ್ರಿತರಾಗಿ ಡೇರೆಗಳಲ್ಲಿ ಆಶ್ರಯ ಪಡೆಯುತ್ತಿದ್ದ ಮುಗ್ಧ ನಾಗರಿಕರನ್ನು ಹತ್ಯೆಗೈಯಲಾಗಿದೆ. ಇಂತಹ ಭಯಾನಕ ಕೃತ್ಯವನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.