ADVERTISEMENT

ಕುರಾನ್ ಉಲ್ಲೇಖಿಸಿ ಇಸ್ರೇಲ್‌ ರಾಯಭಾರ ಕಚೇರಿ ಪೋಸ್ಟ್‌: ಸಿಂಗಪುರ ಆಕ್ಷೇಪ

ಪಿಟಿಐ
Published 25 ಮಾರ್ಚ್ 2024, 13:43 IST
Last Updated 25 ಮಾರ್ಚ್ 2024, 13:43 IST
....
....   

ಸಿಂಗಪುರ: ಕುರಾನ್‌ ಧರ್ಮಗ್ರಂಥವನ್ನು ಉಲ್ಲೇಖಿಸಿ ಸಿಂಗಪುರದ ಇಸ್ರೇಲ್‌ ರಾಯಭಾರ ಕಚೇರಿಯು ಫೇಸ್‌ಬುಕ್‌ನಲ್ಲಿ ಭಾನುವಾರ ಮಾಡಿದ್ದ ಪೋಸ್ಟೊಂದನ್ನು ‘ಅಸೂಕ್ಷ್ಮ’ ಎಂದು ಕರೆದಿರುವ ಅಲ್ಲಿಯ ಸರ್ಕಾರ, ಆ ಪೋಸ್ಟ್‌ಅನ್ನು ಅಳಿಸುವಂತೆ ರಾಯಭಾರ ಕಚೇರಿ ಮೇಲೆ ಒತ್ತಡ ಹೇರಿತ್ತು. ಆ ಬಳಿಕ ಕಚೇರಿಯು ಆ ಪೋಸ್ಟನ್ನು ಅಳಿಸಿಹಾಕಿದೆ.

‘ಪವಿತ್ರ ಕುರಾನ್‌ನಲ್ಲಿ ‘ಇಸ್ರೇಲ್‌’ಅನ್ನು 43 ಬಾರಿ ಉಲ್ಲೇಖಿಸಲಾಗಿದೆ. ಆದರೆ ‘ಪ್ಯಾಲೆಸ್ಟೀನ್‌ ಅನ್ನು ಒಂದು ಬಾರಿಯೂ ಉಲ್ಲೇಖಿಸಲಾಗಿಲ್ಲ’ ಎಂದು ಇಸ್ರೇಲ್‌ ಪೋಸ್ಟ್‌ ಮಾಡಿತ್ತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಿಂಗಪುರದ ಕಾನೂನು ಮತ್ತು ಗೃಹ ವ್ಯವಹಾರಗಳ ಸಚಿವ ಕೆ. ಷಣ್ಮುಗಂ, ‘ಈ ಪೋಸ್ಟ್‌ ಸೂಕ್ಷ್ಮತೆ ಹೊಂದಿಲ್ಲ, ಅಸಮಂಜಸವಾಗಿದೆ ಮತ್ತು ಸ್ವೀಕಾರಾರ್ಹವಾಗಿಲ್ಲ. ಇದು ಇತಿಹಾಸವನ್ನು ಪುನರ್‌ರಚಿಸುವ ಪ್ರಯತ್ನದಂತಿದೆ. ಅಲ್ಲದೇ, ಸಿಂಗಪುರದಲ್ಲಿ ಭದ್ರತೆ, ರಕ್ಷಣೆ ಮತ್ತು ಸೌಹಾರ್ದಕ್ಕೆ ಈ ಪೋಸ್ಟ್‌ನಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದರು. 

ADVERTISEMENT

ಅಲ್ಲಿಯ ವಿದೇಶಾಂಗ ಸಚಿವ ವಿವಿಯನ್‌ ಬಾಲಕೃಷ್ಣ ಅವರೂ ಈ ಪೋಸ್ಟ್‌ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ‘ರಾಜಕೀಯ ಹೇಳಿಕೆ ನೀಡುವ ಸಲುವಾಗಿ ಧರ್ಮಗ್ರಂಥಗಳನ್ನು ಉಲ್ಲೇಖಿಸುವುದು ಸಮಂಜಸವಲ್ಲ. ಇಸ್ರೇಲ್‌ ರಾಯಭಾರ ಕಚೇರಿಯು ತನ್ನ ಪೋಸ್ಟ್‌ ಹಿಂಪಡೆದಿರುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.