ADVERTISEMENT

ಬೈರೂತ್‌: ಲೆಬನಾನ್‌ನ ಇಬ್ಬರು ಯೋಧರ ಸಾವು

ಇಸ್ರೇಲ್‌ ವೈಮಾನಿಕ ದಾಳಿ * ಮನೆಗಳನ್ನು ತೊರೆಯಲು ಪ್ಯಾಲೆಸ್ಟೀನಿಯರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 15:52 IST
Last Updated 12 ಅಕ್ಟೋಬರ್ 2024, 15:52 IST
ಲೆಬನಾನ್‌ನ ಬಾಲ್‌ಬೆಕ್‌ ನಗರದ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹಾನಿಗೆ ಒಳಗಾಗಿರುವ ಕಟ್ಟಡಗಳು  ಎಎಫ್‌ಪಿ ಚಿತ್ರ 
ಲೆಬನಾನ್‌ನ ಬಾಲ್‌ಬೆಕ್‌ ನಗರದ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹಾನಿಗೆ ಒಳಗಾಗಿರುವ ಕಟ್ಟಡಗಳು  ಎಎಫ್‌ಪಿ ಚಿತ್ರ     

ಬೈರೂತ್‌/ಜೆರುಸಲೇಮ್(ಎಪಿ): ಇಸ್ರೇಲ್‌ ಪಡೆಗಳು ದಕ್ಷಿಣ ಲೆಬನಾನ್‌ನಲ್ಲಿ ಶುಕ್ರವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ ಇಬ್ಬರು ಸೈನಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನೆ ಪಡೆಯ ಕೇಂದ್ರ ಕಚೇರಿ ಮೇಲೆಯೂ ಈ ದಾಳಿ ನಡೆದಿದ್ದು, ಗಾಯಗೊಂಡವರಲ್ಲಿ ಇಬ್ಬರು ಶಾಂತಿಪಾಲನೆ ಪಡೆ ಸಿಬ್ಬಂದಿಯೂ ಸೇರಿದ್ದಾರೆ ಎಂದು ಲೆಬನಾನ್‌ ಸೇನೆ ತಿಳಿಸಿದೆ.

‘ಹಿಂದಿನ 24 ಗಂಟೆಗಳ ಅವಧಿಯಲ್ಲಿ, ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ 60 ಜನರು ಮೃತಪಟ್ಟು, ಇತರ 168 ಮಂದಿ ಗಾಯಗೊಂಡಿದ್ದಾರೆ’ ಎಂದು ಲೆಬನಾನ್‌ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ADVERTISEMENT

ಇದರೊಂದಿಗೆ, ಇಸ್ರೇಲ್‌ ಮತ್ತು ಹಿಜ್ಬುಲ್ಲಾ ಬಂಡುಕೋರರ ಗುಂಪಿನ ನಡುವೆ ಕಳೆದ ವರ್ಷದಿಂದ ನಡೆಯುತ್ತಿರುವ ಕಾಳಗದಲ್ಲಿ ಈ ವರೆಗೆ ಮೃತಪಟ್ಟವರ ಸಂಖ್ಯೆ 2,229ಕ್ಕೆ ಹಾಗೂ ಗಾಯಗೊಂಡವರ ಸಂಖ್ಯೆ 10,380ಕ್ಕೆ ಏರಿದಂತಾಗಿದೆ.

ಹಿಜ್ಬುಲ್ಲಾ ಗುರಿಯಾಗಿಸಿ ಇಸ್ರೇಲ್‌ ಪಡೆಗಳು ದಾಳಿಯನ್ನು ಹೆಚ್ಚಿಸಿದ್ದು, ಇದರ ಭಾಗವಾಗಿ ವೈಮಾನಿಕ ಹಾಗೂ ಭೂದಾಳಿ ನಡೆಸಿವೆ.

ಮುಂದುವರಿದ ಶೋಧ: ಬೈರೂತ್‌ನ ಕೇಂದ್ರ ಭಾಗದಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಯಿತು. ಇಸ್ರೇಲ್‌ ಪಡೆಗಳ ದಾಳಿಯಿಂದ ಧ್ವಂಸಗೊಂಡಿರುವ ಕಟ್ಟಡಗಳಡಿ ಸಿಲುಕಿರುವವರ ಹಾಗೂ ಮೃತದೇಹಗಳ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೂಚನೆ: ಗಾಜಾ ಪಟ್ಟಿ ಮೇಲಿನ ದಾಳಿಯನ್ನು ತೀವ್ರಗೊಳಿಸಲು ಮುಂದಾಗಿರುವ ಇಸ್ರೇಲ್‌, ಉತ್ತರ ಭಾಗದಲ್ಲಿರುವ ಪ್ಯಾಲೆಸ್ಟೀನಿಯನ್ನರು ಮನೆಗಳು ಹಾಗೂ ಆರೈಕೆ ಕೇಂದ್ರಗಳನ್ನು ತೊರೆಯುವಂತೆ ಶನಿವಾರ ಸೂಚಿಸಿದೆ.

ಸಿರಿಯಾ ಮೇಲೆ ದಾಳಿ: ಸಿರಿಯಾದಲ್ಲಿರುವ ಐಎಸ್‌ನ ಹಲವು ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಅಮೆರಿಕ ಸೇನೆ ಹೇಳಿದೆ.

- ಇರಾನ್‌ ಮೇಲೆ ನಿರ್ಬಂಧ: ಮತ್ತಷ್ಟು ವಿಸ್ತರಿಸಿದ ಅಮೆರಿಕ

ಇಸ್ರೇಲ್‌ ಮೇಲೆ ಇರಾನ್‌ ಅಕ್ಟೋಬರ್‌ 1ರಂದು ನಡೆಸಿದ ದಾಳಿಗೆ ಸಂಬಂಧಿಸಿ ಇರಾನ್‌ನ ಇಂಧನ ಕ್ಷೇತ್ರದ ಮೇಲಿನ ನಿರ್ಬಂಧಗಳನ್ನು ಅಮೆರಿಕ ಮತ್ತಷ್ಟು ಹೆಚ್ಚಿಸಿದೆ. ಇರಾನ್‌ ತನ್ನ ತೈಲೋತ್ಪನ್ನ ಮಾರಾಟಕ್ಕಾಗಿ ಯುಎಇ ಲೈಬಿರಿಯಾ ಹಾಂಗ್‌ಕಾಂಗ್‌ಗಳಲ್ಲಿ ಹೊಂದಿರುವ ಕಂಪನಿಗಳ ಕಾರ್ಯಾಚರಣೆಗೆ ಈ ನಿರ್ಬಂಧ ತೊಡಕಾಗಲಿದೆ. ಅಲ್ಲದೇ ತೈಲೋತ್ಪನ್ನ ಸಾಗಿಸುವ ಹಡಗುಗಳ ಕಾರ್ಯಾಚರಣೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.