ರಫಾ, ಗಾಜಾ ಪಟ್ಟಿ : ಗಾಜಾ ಪಟ್ಟಿಯ ಮನೆಯೊಂದರಲ್ಲಿ ಬಿಗಿ ಭದ್ರತೆಯಲ್ಲಿರಿಸಿದ್ದ ಇಬ್ಬರು ಒತ್ತೆಯಾಳುಗಳನ್ನು ಇಸ್ರೇಲ್ ಪಡೆಗಳು ರಕ್ಷಿಸಿವೆ. ಇನ್ನೊಂದೆಡೆ ವಾಯುದಾಳಿ ಮುಂದುವರಿದಿದ್ದು, 67 ಜನರು ಅಸುನೀಗಿದ್ದಾರೆ.
ಗಾಜಾಪಟ್ಟಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಇದು, ಹಮಾಸ್‌ಬಂಡುಕೋರರ ವಶದಿಂದ ಒತ್ತೆಯಾಳುಗಳ ಮೊದಲ ರಕ್ಷಣೆಯಾಗಿದೆ. ರಫಾ ಪಟ್ಟಣದಲ್ಲಿ ವಾಯುದಾಳಿಯಿಂದ ಹಲವು ಕಟ್ಟಡಗಳು ಜಖಂಗೊಂಡಿವೆ.
‘ಸೋಮವಾರ ಬೆಳಗಿನ ಜಾವ ವಾಯುದಾಳಿ ನಡೆದಿದ್ದು, ಮಹಿಳೆಯರು, ಮಕ್ಕಳು ಒಳಗೊಂಡು 67 ಜನರು ಮೃತರಾದರು’ ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಖಿದ್ರಾ ಖಚಿತಪಡಿಸಿದ್ದಾರೆ.
‘ರಫಾದ ಅಬು ಯೂಸುಫ್ ನಜ್ಜರ್ ಆಸ್ಪತ್ರೆಯಲ್ಲಿ ಕನಿಷ್ಠ 50 ಶವಗಳನ್ನು ನೋಡಿರುವುದಾಗಿ’ ಎ.ಪಿ ಸುದ್ದಿಸಂಸ್ಥೆಯ ಪ್ರತಿನಿಧಿ ವರದಿ ಮಾಡಿದ್ದಾರೆ.
ಇಸ್ರೇಲ್ ಪಡೆಗಳ ಪ್ರಕಾರ, ಇನ್ನು ಸುಮಾರು 100 ಒತ್ತೆಯಾಳುಗಳು ಹಮಾಸ್ ವಶದಲ್ಲಿ ಇದ್ದಾರೆ. ಒತ್ತೆಯಾಳಾಗಿದ್ದ ಅವಧಿಯಲ್ಲಿಯೇ ಸುಮಾರು 30 ಜನರು ಮೃತಪಟ್ಟಿದ್ದಾರೆ.
ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತು ಇಸ್ರೇಲ್ ಮತ್ತು ಹಮಾಸ್ ನಡುವಿನ ಚರ್ಚೆಯಲ್ಲಿ ಪ್ರಗತಿ ಕಂಡುಬಂದಿದೆ ಎಂದು ಅಧಿಕಾರಿಗಳು ಈಜಿಪ್ಟ್ ರಾಜಧಾನಿ ಕೈರೊದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.