ರಫಾ (ಗಾಜಾ ಪಟ್ಟಿ): ದಕ್ಷಿಣ ಗಾಜಾ ಪಟ್ಟಿಯ ರಫಾ ನಗರದ ಕಟ್ಟಡವೊಂದರಲ್ಲಿ ಹಮಾಸ್ ಬಂಡುಕೋರರು ಒತ್ತೆಸೆರೆಯಲ್ಲಿರಿಸಿದ್ದ ಇಬ್ಬರನ್ನು ಇಸ್ರೇಲ್ ಪಡೆಗಳು ಸೋಮವಾರ ರಕ್ಷಿಸಿವೆ.
ಅಕ್ಟೋಬರ್ 7ರಂದು ಇಸ್ರೇಲ್‌ನ ನಿರ್ ಯಿಟ್ಜಾಕ್ ಪ್ರದೇಶದಿಂದ ಬಂಡುಕೋರರು ಅಪಹರಿಸಿದ್ದ 60 ಮತ್ತು 70 ವರ್ಷದ ಇಬ್ಬರು ವ್ಯಕ್ತಿಗಳನ್ನು ರಕ್ಷಣೆ ಮಾಡಿರುವುದಾಗಿ ಇಸ್ರೇಲ್ ಸೇನಾಪಡೆಯ ಮೂಲಗಳು ಹೇಳಿವೆ.
ಹಮಾಸ್ ಬಂಡುಕೋರರು ಸುತ್ತುವರಿದಿದ್ದ ಕಟ್ಟಡದ ಎರಡನೇ ಮಹಡಿಯಿಂದ ಒತ್ತೆಯಾಳುಗಳನ್ನು ರಕ್ಷಣೆ ಮಾಡಲಾಗಿದೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ವಿವರಿಸಿವೆ.
100ಕ್ಕೂ ಹೆಚ್ಚು ಮಂದಿ ಇನ್ನೂ ಹಮಾಸ್ ಬಂಡುಕೋರರ ಒತ್ತೆಸೆರೆಯಲ್ಲಿದ್ದಾರೆ ಎಂದು ಇಸ್ರೇಲ್‌ನ ಅಧಿಕಾರಿಗಳು ತಿಳಿಸಿದ್ದಾರೆ
ರಕ್ಷಣಾ ಕಾರ್ಯಾಚರಣೆ ನಡೆದ ಕಟ್ಟಡದ ಸಮೀಪ ಪ್ರದೇಶಗಳಲ್ಲಿರುವ ವಸತಿ ಸಮುಚ್ಚಯಗಳ ಮೇಲೆ ಇಸ್ರೇಲ್ ಪಡೆಗಳು ವಾಯು ದಾಳಿ ತೀವ್ರಗೊಳಿಸಿವೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 67 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದೂ ಹೇಳಿದ್ದಾರೆ.
ರಫಾ ನಗರವು ಗಾಜಾ ಪಟ್ಟಿಯಲ್ಲಿ ಹಮಾಸ್ ಬಂಡುಕೋರರ ನಿಯಂತ್ರಣದಲ್ಲಿರುವ ಕೊನೆಯ ನಗರವಾಗಿದೆ ಎಂದಿರುವ ಇಸ್ರೇಲ್‌ನ ಸೇನಾಪಡೆಯು, ಹೆಚ್ಚು ಜನಸಾಂದ್ರತೆ ಇರುವ ಈ ನಗರದಲ್ಲಿ ಭೂ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಸುಳಿವನ್ನೂ ನೀಡಿದೆ.
ನಾಗರಿಕರ ರಕ್ಷಣೆಗೆ ವಿಶ್ವಾಸಾರ್ಹ ಮತ್ತು ಕಾರ್ಯಗತಗೊಳಿಸಬಹುದಾದ ಯೋಜನೆ ಇಲ್ಲದೆ ರಫಾ ನಗರದಲ್ಲಿ ಹಮಾಸ್ ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬಾರದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿರುವುದಾಗಿ ಶ್ವೇತಭವನದ ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಫಾ ನಗರದಲ್ಲಿ ಸೇನಾ ಕಾರ್ಯಾಚರಣೆ ತೀವ್ರಗೊಳಿಸುವ ಬಗ್ಗೆ ಇಸ್ರೇಲ್ ಸೇನಾಪಡೆ ಸುಳಿವು ನೀಡಿರುವುದರಿಂದ, ಅಲ್ಲಿನ ನಾಗರಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಯುದ್ಧ ಆರಂಭವಾದ ಬಳಿಕ 14 ಲಕ್ಷಕ್ಕೂ ಹೆಚ್ಚು ಮಂದಿ ಪ್ಯಾಲೆಸ್ಟೀನಿಯರು ಗಾಜಾ ಪಟ್ಟಿಯ ವಿವಿಧೆಡೆಯಿಂದ ರಫಾ ನಗರಕ್ಕೆ ಆಶ್ರಯ ಅರಸಿ ತೆರಳಿದ್ದರು. ಅಲ್ಲಿ ವಿಶ್ವಸಂಸ್ಥೆಯ ನೆರವಿನಲ್ಲಿ ನಿರ್ಮಿಸಿರುವ ಟೆಂಟ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ.
ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಇದುವರೆಗೆ 12,300 ಅಪ್ರಾಪ್ತ ವಯಸ್ಕರು ಮೃತಪಟ್ಟಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
ಇದುವರೆಗೆ ಮೃತಪಟ್ಟಿರುವ 28,176 ಮಂದಿ ಪ್ಯಾಲೆಸ್ಟೀನಿಯರಲ್ಲಿ ಶೇ 47ರಷ್ಟು ಅಪ್ರಾಪ್ತ ವಯಸ್ಕರು ಇದ್ದಾರೆ. ಮೃತಪಟ್ಟವರಲ್ಲಿ 8,400 ಮಹಿಳೆಯರೂ ಇದ್ದಾರೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.