ADVERTISEMENT

ಹಿಜ್ಬುಲ್ಲಾ ಗುರಿಯಾಗಿಸಿ ದಾಳಿ: ಭೂಸೇನೆ ಕಾರ್ಯಾಚರಣೆಗೆ ಇಸ್ರೇಲ್‌ ಸಜ್ಜು

ಏಜೆನ್ಸೀಸ್
Published 1 ಅಕ್ಟೋಬರ್ 2024, 23:30 IST
Last Updated 1 ಅಕ್ಟೋಬರ್ 2024, 23:30 IST
<div class="paragraphs"><p>ಭೂಸೇನೆ ಕಾರ್ಯಾಚರಣೆಗಾಗಿ ಮಂಗಳವಾರ ಲೆಬನಾನ್‌ನ ಗಡಿಯಲ್ಲಿ ಇಸ್ರೇಲ್‌ ಉತ್ತರ ಭಾಗದಲ್ಲಿ ನೆಲಗೊಂಡಿರುವ ಸೇನೆ </p></div>

ಭೂಸೇನೆ ಕಾರ್ಯಾಚರಣೆಗಾಗಿ ಮಂಗಳವಾರ ಲೆಬನಾನ್‌ನ ಗಡಿಯಲ್ಲಿ ಇಸ್ರೇಲ್‌ ಉತ್ತರ ಭಾಗದಲ್ಲಿ ನೆಲಗೊಂಡಿರುವ ಸೇನೆ

   

ಜೆರುಸಲೇಂ: ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಈಗ ಭೂಸೇನೆ ದಾಳಿಗೆ ಇಸ್ರೇಲ್‌ ಮುಂದಾಗಿದೆ. ದಕ್ಷಿಣ ಲೆಬನಾನ್‌ನ ಗಡಿಭಾಗದಲ್ಲಿ ನೆಲಸಿರುವ 24ಕ್ಕೂ ಹೆಚ್ಚು ಸಮುದಾಯಗಳ ನಿವಾಸಿಗಳಿಗೆ ಆ ಪ್ರದೇಶ ಬಿಟ್ಟು ಹೋಗುವಂತೆ ತಾಕೀತು ಮಾಡಿದೆ.

‘ಎಕ್ಸ್‌’ ಮೂಲಕ ಈ ಎಚ್ಚರಿಕೆ ನೀಡಿರುವ ಸೇನೆಯ ವಕ್ತಾರರು, ‘ಗಡಿಯಿಂದ 60 ಕಿ.ಮೀ. ದೂರದ ಅವಾಲಿ ನದಿಯ ಉತ್ತರ ಭಾಗದಿಂದ ನಿವಾಸಿಗಳು ತೆರವುಗೊಳ್ಳಬೇಕು’ ಎಂದು ಸೂಚಿಸಿದ್ದಾರೆ. 

ADVERTISEMENT

‘ಕಾರ್ಯಾಚರಣೆಗೆ 4 ಹೆಚ್ಚುವರಿ ತುಕಡಿ ನಿಯೋಜಿಸಿದೆ. ಕಾರ್ಯಾಚರಣೆ ವೇಳೆ ಬೈರೂತ್ ಅಥವಾ ಇತರೆ ನಗರಗಳ ಮೇಲೆ ದಾಳಿ ನಡೆಸುವುದಿಲ್ಲ’ ಎಂದು ಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಹಿಜ್ಬುಲ್ಲಾ ಗುರಿಯಾಗಿಸಿ ಈ ಸೀಮಿತ ಕಾರ್ಯಾಚರಣೆ ನಡೆಯಲಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಇನ್ನೊಂದೆಡೆ ವಾಯುದಾಳಿಯನ್ನೂ ಇಸ್ರೇಲ್‌ ಮುಂದುವರಿದಿದೆ. ಹಿಜ್ಬುಲ್ಲಾ ಬಂಡುಕೋರರು ನೆಲಸಿದ್ದಾರೆ ಎಂದು ಶಂಕಿಸಲಾದ ಬೈರೂತ್ ವಲಯದಲ್ಲಿ ದಾಳಿ ಶಬ್ದ, ದಟ್ಟ ಹೊಗೆ ಕಂಡುಬಂತು.  

ನೇರ ಸಂಘರ್ಷಕ್ಕೆ ಸಿದ್ಧ: ಇನ್ನೊಂದೆಡೆ ‘ನೇರ ಸಂಘರ್ಷಕ್ಕೆ ಸಿದ್ಧ’ ಎಂದು ಹಿಜ್ಬುಲ್ಲಾ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ಹಿಜ್ಬುಲ್ಲಾದ ನಾಯಕರಾದ ಹಸನ್‌ ನಸ್ರಲ್ಲಾ ಹಾಗೂ ಇತರೆ ನಾಯಕರ ಹತ್ಯೆಯ ಬಳಿಕವೂ ಈ ಹೇಳಿಕೆ ಹೊರಬಿದ್ದಿದೆ.

ಹಿಜ್ಬುಲ್ಲಾದ ಹಂಗಾಮಿ ನಾಯಕ ನೈಮ್ ಕಸೀಮ್ ಸುದ್ದಿ ವಾಹಿನಿ ಮೂಲಕ ಸಂಘಟನೆಯ ನಿಲುವನ್ನು ಪ್ರಕಟಿಸಿದ್ದಾರೆ. ‘ಇಸ್ರೇಲ್‌ ಭೂದಾಳಿ ಮುಂದುವರಿಸಿದರೆ, ಅದನ್ನು ಎದುರಿಸಲು ಸಿದ್ಧರಿದ್ದೇವೆ. ಇತ್ತೀಚೆಗೆ ಹತ್ಯೆಯಾದ ನಾಯಕರ ಸ್ಥಾನದಲ್ಲಿ ಹೊಸಬರ ನೇಮಕ ಆಗಿದೆ’ ಎಂದಿದ್ದಾರೆ.

ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ
ಇಸ್ರೇಲ್‌ನ ಮೇಲೆ ಮಂಗಳವಾರ ರಾತ್ರಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಇದರ ಹಿಂದೆಯೇ ಇಸ್ರೇಲ್‌ ನಾಗರಿಕರಿಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ. ಪ್ರಾಣಹಾನಿ ವಿವರ ಗೊತ್ತಾಗಿಲ್ಲ. ಸುರಕ್ಷಿತ ತಾಣಗಳು ಹಾಗೂ ಆದಷ್ಟು ಬಾಂಬ್‌ ‌ಶೆಲ್ಟರ್‌ಗಳ ಬಳಿಯೇ ಇರಬೇಕು ಎಂದು ನಿವಾಸಿಗಳಿಗೆ ಸಲಹೆ ಮಾಡಿದೆ. ದಾಳಿ ಮಾಡಿದಲ್ಲಿ ಪ್ರತಿರೋಧ ಎದುರಿಸಬೇಕಾದಿತು ಎಂದು ಇಸ್ರೇಲ್ ಎಚ್ಚರಿಸಿದೆ.
ದಕ್ಷಿಣ ಕೊರಿಯಾದಿಂದ ಅಧಿಕ ಸಾಮರ್ಥ್ಯದ ಕ್ಷಿಪಣಿ ಪ್ರದರ್ಶನ 
ಸೋಲ್: ಅಧಿಕ ಸಾಮರ್ಥ್ಯ ಮತ್ತು ಪರಿಣಾಮಕಾರಿ ಎನ್ನಲಾದ ಹೊಸ ಖಂಡಾಂತರ ಕ್ಷಿಪಣಿಯನ್ನು ದಕ್ಷಿಣ ಕೊರಿಯಾ ಶನಿವಾರ ಪ್ರದರ್ಶಿಸಿದೆ. ‘ಉತ್ತರ ಕೊರಿಯಾ ಒಂದು ವೇಳೆ ಅಣ್ವಸ್ತ್ರ ಬಳಕೆಗೆ ಯತ್ನಿಸಿದಲ್ಲಿ ತೀವ್ರ ಪ್ರತಿರೋಧ ಎದುರಿಸಲಿದ್ದು ಅಲ್ಲಿನ ಆಡಳಿತ ಕುಸಿಯಲಿದೆ’ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರು ತನ್ನ ಸೇನಾ ದಿನ ಕಾರ್ಯಕ್ರಮದಲ್ಲಿ ಎಚ್ಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಕೊರಿಯಾ 340 ಸೇನಾ ಪರಿಕರಗಳನ್ನು ಪ್ರದರ್ಶಿಸಿತು. ಇದರಲ್ಲಿ ಅಧಿಕ ಸಾಮರ್ಥ್ಯದ ಹ್ಯೂನ್ಮೂ–5 ಕ್ಷಿಪಣಿ ಸೇರಿದೆ. ‘ಇದು 8 ಟನ್‌ ತೂಕದ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಉತ್ತರ ಕೊರಿಯಾದಲ್ಲಿರುವ ಭೂಗತ ಬಂಕರ್‌ಗಳನ್ನು ಇದು ನಾಶಪಡಿಸಬಲ್ಲದು’ ಎಂದು ಸೇನೆ ಹೇಳಿಕೊಂಡಿದೆ.  
ರಷ್ಯಾದಿಂದ ಫಿರಂಗಿದಾಳಿ; ಏಳು ಸಾವು
ಕೀವ್: ದಕ್ಷಿಣ ಉಕ್ರೇನ್‌ನ ಖೆರ್ಸಾನ್‌ ನಗರದ ಮಾರುಕಟ್ಟೆ ಮೇಲೆ ರಷ್ಯಾದ ಸೇನೆ ನಡೆಸಿದ ಫಿರಂಗಿ ದಾಳಿಯಲ್ಲಿ ಏಳು ಮಂದಿ ಸತ್ತಿದ್ದು ಮೂವರು ಗಾಯಗೊಂಡರು. ತರಕಾರಿ ಮಳಿಗೆಗಳ ನಡುವೆ ಶವಗಳು ಬಿದ್ದಿರುವ ವಿಡಿಯೊ ಅನ್ನು ಖೆರ್ಸಾನ್‌ನ ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಪೊಕೊದಿನ್ ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ರಷ್ಯಾದ ಕುರ್ಸ್ಕ್ ವಲಯದ ಗಡಿಯಲ್ಲಿ ರಷ್ಯಾ ಸೇನೆಯು ಅತಿಕ್ರಮಣಕ್ಕೆ ಯತ್ನಿಸಿದ್ದು ಉಕ್ರೇನ್‌ ಸೇನೆಯು ತೀವ್ರ ಪ್ರತಿರೋಧ ಒಡ್ಡಿದೆ ಎಂದು ಹೇಳಲಾಗಿದೆ.    ರಷ್ಯಾ 2022ರ ಫೆಬ್ರುವರಿಯಲ್ಲಿ ಅತಿಕ್ರಮಣ ನಡೆಸಿ ಖೆರ್ಸಾನ್‌ ಅನ್ನು ಸ್ವಾಧೀನ ಪಡೆದಿತ್ತು. ಉಕ್ರೇನ್‌ ಮರುದಾಳಿ ನಡೆಸಿ ಇದನ್ನು ಮರಳಿ ವಶಕ್ಕೆ ಪಡೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.