ಜೆರುಸಲೇಂ: ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆಯನ್ನು ಹಮಾಸ್ ವಿಳಂಬ ಮಾಡಿದೆ. ನಿಗದಿಯಂತೆ 14 ಒತ್ತೆಯಾಳುಗಳ ಬಿಡುಗಡೆ ಆಗಬೇಕಿತ್ತು.
ಕದನವಿರಾಮ ಒಪ್ಪಂದ ನಿಯಮಗಳಿಗೆ ಇಸ್ರೇಲ್ ಬದ್ಧವಾಗಿರುವ ಕುರಿತು ಸ್ಪಷ್ಟತೆ ಸಿಗುವವರೆಗೂ ಒತ್ತೆಯಾಳುಗಳ ಬಿಡುಗಡೆ ವಿಳಂಬ ಮಾಡಲಾಗುವುದು ಎಂದು ಹಮಾಸ್ ಶನಿವಾರ ತಿಳಿಸಿದೆ.
ಮಾನವೀಯ ನೆಲೆ ಒದಗಿಸಲು ಗಾಜಾಪಟ್ಟಿಗೆ ಪ್ರವೇಶ ಹಾಗೂ ಇಸ್ರೇಲ್‌ನಿಂದ ಯುದ್ಧ ಕೈದಿಗಳ ಬಿಡುಗಡೆ ಇರುವ ಮಾನದಂಡ ಕುರಿತಂತೆ ಪ್ರಶ್ನೆಗಳಿವೆ ಎಂದು ಹಮಾಸ್‌ನ ಎಜೆಡೈನ್ ಅಲ್ ಖಾಸಂ ಬ್ರಿಗೇಡ್ ಹೇಳಿಕೆ ನೀಡಿದೆ.
‘ಮಹಿಳೆಯರು ಸೇರಿ 42 ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಒಬ್ಬ ಒತ್ತೆಯಾಳು ಬಿಡುಗಡೆಗೆ ಪ್ರತಿಯಾಗಿ ಮೂವರು ಕೈದಿಗಳ ಬಿಡುಗಡೆಗೆ ಒಪ್ಪಂದವಾಗಿದೆ’ ಎಂದು ಇಸ್ರೇಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಬಿಡುಗಡೆಯಾಗುವ 14 ಒತ್ತೆಯಾಳುಗಳ ವಿವರದ ಪಟ್ಟಿ ತಲುಪಿದೆ ಎಂದು ಇಸ್ರೇಲ್‌ನ ಪ್ರಧಾನಮಂತ್ರಿ ಕಚೇರಿ ತಿಳಿಸಿತ್ತು. ಆದರೆ, ಕೊನೆಗಳಿಗೆಯಲ್ಲಿ ಬಿಡುಗಡೆ ವಿಳಂಬವಾಯಿತು.
ಗಾಜಾಪಟ್ಟಿಯಲ್ಲಿ ನಿಗದಿಯಂತೆ ರೆಡ್‌ಕ್ರಾಸ್ ಪ್ರತಿನಿಧಿಗಳಿಗೆ ಒತ್ತೆಯಾಳುಗಳ ಹಸ್ತಾಂತರವಾಗಿಲ್ಲ ಎಂದು ಇಸ್ರೇಲ್‌ನ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಯು ಇಸ್ರೇಲ್‌ನಲ್ಲಿ ಕುಟುಂಬ ಸದಸ್ಯರಿಗೆ ಸಮಾಧಾನ ಮೂಡಿಸಿದೆ. ಬಿಡುಗಡೆ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕುಟುಂಬ ಸದಸ್ಯರಲ್ಲಿ ಆತಂಕದ ವಾತಾವರಣ ಮೂಡಿತ್ತು. ಪ್ರತ್ಯೇಕ ಒಪ್ಪಂದದ ಅನುಸಾರ, ಥಾಯ್ಲೆಂಡ್‌ನ 10 ಮತ್ತು ಫಿಲಿಪಿನೊದ ಒಬ್ಬ ಪ್ರಜೆಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿತ್ತು.
ಗೆಳೆಯ ಜೀವಂತ, ಯುವತಿಗೆ ಸಂಭ್ರಮ: ಹಮಾಸ್ ದಾಳಿಯಿಂದ ಮೃತಪಟ್ಟಿದ್ದ 40 ಥಾಯ್ ಪ್ರಜೆಗಳಲ್ಲಿ ಗೆಳೆಯ ಸೇರಿದ್ದಾನೆ ಎಂದು ಭಾವಿಸಿದ್ದ ಬ್ಯಾಂಕಾಕ್ ಯುವತಿ ಕಿಟ್ಟಿಯ ತುಯೆಂಗ್ ಸಯೆಂಗ್‌ಗೆ ಅನಿರೀಕ್ಷಿತ ಸಂಭ್ರಮ.
ಹಮಾಸ್ ಬಿಡುಗಡೆ ಮಾಡಿದ್ದ ಒತ್ತೆಯಾಳುಗಳಲ್ಲಿ ಈಕೆಯ 28 ವರ್ಷದ ಗೆಳೆಯನೂ ಇದ್ದ. ‘ನನ್ನ ಕಣ್ಣನ್ನೇ ನಂಬಲಾಗುತ್ತಿಲ್ಲ. ಬೆಳಿಗ್ಗೆ ಆತನ ಜೊತೆಗೆ ಚಾಟ್ ಮಾಡಿದೆ. ಆತನಲ್ಲಿ ನಗುವಿತ್ತು‘ ಎಂದು ಕಿಟ್ಟಿಯ ಹೇಳಿದರು.
ಬದುಕಿದ್ದೇನೆ ಎಂದು ಒತ್ತೆಯಾಳು ಸಂದೇಶ: ‘ನಾನು ಬದುಕಿದ್ದೇನೆ. ಅಮ್ಮ
ನಿಗೂ ಹೇಳು. ಬರುತ್ತಿದ್ದೇನೆ’ ಎಂದು ಬಿಡುಗಡೆಯಾದ ಒತ್ತೆಯಾಳು, ಬ್ಯಾಂಕಾಕ್‌ನ ನಿವಾಸಿ ವೆಟೂನ್ ತನ್ನ ತಮ್ಮ ರೂಂಗರೂನ್‌ಗೆ ಸಂದೇಶ ನೀಡಿದ್ದಾನೆ. ವೆಟೂನ್ 5 ವರ್ಷದಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದರು. ಹಮಾಸ್ ಬಂಡುಕೋರರು ದಾಳಿ ಬಳಿಕ ಒತ್ತೆಯಾಳಾಗಿ ಕರೆದೊಯ್ದಿದ್ದ 10 ಮಂದಿ ಥಾಯ್ ಪ್ರಜೆಗಳಲ್ಲಿ ಒಬ್ಬರಾಗಿದ್ದರು.
ನಾನು ಬದುಕಿದ್ದೇನೆ, ಸತ್ತಿಲ್ಲ ಎಂದು ಅಣ್ಣ ಉದ್ಗರಿಸಿದ. ಆತ ಉಳಿದಿರುವುದು ಪವಾಡ ಎಂದು ರೂಂಗರೂನ್ ಸಂತಸಪಟ್ಟರು. ‘ಗಾಜಾದಲ್ಲಿ ದೇಶದ 20 ಪ್ರಜೆಗಳು ಒತ್ತೆಯಾಳಾಗಿದ್ದಾರೆ’ ಎಂದು ಥಾಯ್ಲೆಂಡ್ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.