ADVERTISEMENT

ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ರಾಯಿಟರ್ಸ್
Published 24 ಜುಲೈ 2024, 9:30 IST
Last Updated 24 ಜುಲೈ 2024, 9:30 IST
<div class="paragraphs"><p>ಎಲಾನ್‌ ಮಸ್ಕ್‌</p></div>

ಎಲಾನ್‌ ಮಸ್ಕ್‌

   

ರಾಯಿಟರ್ಸ್‌ ಚಿತ್ರ

ದುಬೈ: ತಮ್ಮ ಒಡೆತನದ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್‌' ತಂತಿರಹಿತ ಅಂತರ್ಜಾಲ (ವೈರ್‌ಲೆಸ್‌ ಇಂಟರ್ನೆಟ್) ಸೇವೆಯನ್ನು ಯುಎಇ ಹಾಗೂ ಇಸ್ರೇಲ್‌ ಸಹಕಾರದೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಉದ್ಯಮಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ADVERTISEMENT

ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'SpaceX'ನ ಸಂಸ್ಥಾಪಕ, ಸಿಇಒ ಆಗಿರುವ ಅವರು ಈ ಮಾಹಿತಿಯನ್ನು ಎಕ್ಸ್‌/ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. 'ಯುಎಇ ಹಾಗೂ ಇಸ್ರೇಲ್‌ ಸಹಕಾರದೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇದೀಗ ಸ್ಟಾರ್‌ಲಿಂಕ್‌ ಸಕ್ರಿಯವಾಗಿದೆ' ಎಂದು ಹೇಳಿದ್ದಾರೆ.

ಗಾಜಾದ ದಕ್ಷಿಣ ನಗರವಾದ ರಫಾದ ಆಸ್ಪತ್ರೆಗಳಲ್ಲಿ 'ಸ್ಟಾರ್‌ಲಿಂಕ್‌' ಇಂಟರ್ನೆಟ್‌ ಬಳಕೆಗೆ ಇಸ್ರೇಲ್‌ ಸರ್ಕಾರ ಐದು ತಿಂಗಳ ಹಿಂದೆಯೇ ಅನುಮತಿ ನೀಡಿತ್ತು.

ಯುದ್ಧದಿಂದಾಗಿ ವೈದ್ಯಕೀಯ ಸೌಕರ್ಯಗಳು ನಾಶಗೊಂಡಿರುವ ಗಾಜಾದಲ್ಲಿ ತೆರೆದಿರುವ ಯುಎಇ ಆಸ್ಪತ್ರೆಗೆ ಇಂಟರ್ನೆಟ್‌ ಒದಗಿಸಿರುವುದಕ್ಕೆ ಮಸ್ಕ್‌ ಅವರಿಗೆ ಯುಎಇ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಬಿನ್ ಜಾಯೇದ್‌ ಅಲ್‌ ನಹ್ಯಾನ್‌ ಧನ್ಯವಾದ ಹೇಳಿದ್ದಾರೆ.

ವಿದ್ಯುತ್‌ ಹಾಗೂ ಇಂಧನ ಕೊರತೆಯಿಂದಾಗಿ ಗಾಜಾದಲ್ಲಿ ಇಂಟರ್ನೆಟ್‌ ಸಂಪರ್ಕ ದುಸ್ತರವಾಗಿದೆ. ಇದು ವೈದ್ಯಕೀಯ ಸಿಬ್ಬಂದಿ, ರಕ್ಷಣಾ ತಂಡಗಳು, ಆಸ್ಪತ್ರೆ ಸೇವೆಗಳು ಹಾಗೂ ಆರೋಗ್ಯ ಇಲಾಖೆಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಉಂಟುಮಾಡಿದೆ.

ವೇಗದ ಇಂಟರ್ನೆಟ್ ಸೇವೆ ದೊರೆತರೆ, ಯುದ್ಧ ಸಂತ್ರಸ್ತರ ಪ್ರಾಣ ಉಳಿಸಲು ನೆರವಾಗುವ ವೈದ್ಯಕೀಯ ಸಮಾಲೋಚನೆಗಳನ್ನು ವಿಡಿಯೊ ಕರೆಗಳ‌ ಮೂಲಕ ನಡೆಸಬಹುದು ಎಂದು ಯುಎಇ ವಿದೇಶಾಂಗ ಸಚಿವಾಲಯ ಫೆಬ್ರುವರಿಯಲ್ಲಿ ಹೇಳಿತ್ತು.

2023ರ ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ 1,200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ. ಈ ಯುದ್ಧದಿಂದಾಗಿ ಇದುವರೆಗೆ 39,000ಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.