ಬೈರೂತ್: ದಕ್ಷಿಣ ಗಾಜಾ ವ್ಯಾಪ್ತಿಯಲ್ಲಿರುವ ಖಾನ್ ಯೂನಿಸ್ ನಗರವನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಸತತ ದಾಳಿ ನಡೆಸಿದ್ದು, 38 ಜನರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..
ಗಾಜಾಪಟ್ಟಿಯಲ್ಲಿ ಕದನ ವಿರಾಮವನ್ನು ಘೋಷಿಸಬೇಕು ಎಂದು ಅಂತರರಾಷ್ಟ್ರೀಯ ವಲಯದಲ್ಲಿ ಒತ್ತಡ ಹೆಚ್ಚುತ್ತಿರುವಂತೆಯೂ, ಇಸ್ರೇಲ್ ಸೇನೆ ವಾಯುದಾಳಿಯನ್ನು ತೀವ್ರಗೊಳಿಸಿದೆ.
ಇನ್ನೊಂದೆಡೆ, ಲೆಬನಾನ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳು ನೆಲಸಿದ್ದ ಕಟ್ಟಡದ ಬಳಿಯೇ ವಾಯುದಾಳಿ ನಡೆದಿದ್ದು, ಲೆಬನಾನ್ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಬೈರೂತ್ ಮೂಲದ ‘ಅಲ್ ಮಯದೀನ್ ಟಿ.ವಿ’ ಸಂಸ್ಥೆಯು, ತನ್ನ ಇಬ್ಬರು ಸಿಬ್ಬಂದಿಯೂ ಸೇರಿದಂತೆ ಮೂವರು ಮೃತಪಟ್ಟರು ಎಂದು ವರದಿ ಮಾಡಿದೆ.
ಅಲ್ಲದೆ, ವಾಯುದಾಳಿಯಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದೂ ಪ್ಯಾಲೆಸ್ಟೀನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಸೇನೆಯೂ ಈ ಕುರಿತು ಹೇಳಿಕೆ ನೀಡಿದೆ. ಹಮಾಸ್‌ನ ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಪ್ಯಾಲೆಸ್ಟೀನ್‌ನ ಹಲವು ಯೋಧರ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ.
ದಕ್ಷಿಣ ಗಾಜಾದ ಜಬಾಲಿಯಾ ಪಟ್ಟಣದಲ್ಲಿ ಕಮಾಲ್ ಅದ್ವಾನ್ ಆಸ್ಪತ್ರೆಯ ಮೇಲೂ ದಾಳಿ ನಡೆದಿದೆ. ಹಲವು ಮಕ್ಕಳು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಈದ್ ಸಬಾ ಹೇಳಿದ್ದಾರೆ.
ದಾಳಿಯಿಂದ ಆಸ್ಪತ್ರೆಯ ಆಮ್ಲಜನಕ ಪೂರೈಕೆ ವ್ಯವಸ್ಥೆ ಹಾನಿಗೊಂಡಿದೆ. ಸುಮಾರು 40 ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ದಾಳಿಯನ್ನು ದೃಢಪಡಿಸಿದೆ.
ಕದನ ವಿರಾಮ: ವಾರಾಂತ್ಯ ಚರ್ಚೆ?
ದೋಹಾ ಕತಾರ್: ಇಸ್ರೇಲ್ ಮತ್ತು ಅಮೆರಿಕದ ಮಧ್ಯಸ್ಥಿಕೆದಾರರು ಕದನ ವಿರಾಮ ಮಾತುಕತೆ ಕುರಿತು ಚರ್ಚಿಸಲು ಈ ವಾರಾಂತ್ಯ ಸೇರುವ ಸಾಧ್ಯತೆಗಳಿವೆ. ಆದರೆ ಲೆಬನಾನ್ ಮತ್ತು ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿರುವ ಇತ್ತೀಚಿನ ದಾಳಿಯಿಂಆಗಿ ಚರ್ಚೆಯಲ್ಲಿ ಭಗವಹಿಸುವ ಕುರಿತು ಹಮಾಸ್ ಸುಳಿವು ನೀಡಿಲ್ಲ. ಹಮಾಸ್ ಭಾಗವಹಿಸುವುದೇ ಎಂದು ಇನ್ನಷ್ಟು ಗೊತ್ತಾಗಬೇಕಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕತಾರ್ನ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ತಾನಿ ಅವರ ಜೊತೆಗೂ ಕದನ ವಿರಾಮ ಘೋಷಣೆ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಚರ್ಚೆಯಲ್ಲಿ ಭಾಗವಹಿಸಲು ದೇಶದ ಗುಪ್ತದಳ ಮುಖ್ಯಸ್ಥ ಡೇವಿಡ್ ಬರ್ನಿಯಾ ದೋಹಾಗೆ ತೆರಳುವರು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.