ADVERTISEMENT

ಲೆಬನಾನ್‌ ಮೇಲೆ ವೈಮಾನಿಕ ದಾಳಿ: ಕದನ ವಿರಾಮ ತಿರಸ್ಕರಿಸಿದ ಇಸ್ರೇಲ್‌

ರಾಯಿಟರ್ಸ್
Published 16 ಅಕ್ಟೋಬರ್ 2024, 19:58 IST
Last Updated 16 ಅಕ್ಟೋಬರ್ 2024, 19:58 IST
<div class="paragraphs"><p>ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ</p></div>

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ

   

ಬೈರೂತ್‌/ವಾಷಿಂಗ್ಟನ್‌ : ಲೆಬನಾನ್‌ ಮೇಲಿನ ತನ್ನ ದಾಳಿಯನ್ನು ಇಸ್ರೇಲ್‌ ಬುಧವಾರ ತೀವ್ರಗೊಳಿಸಿದೆ. ಕದನ ವಿರಾಮ ಪ್ರಸ್ತಾವ ವನ್ನು ತಳ್ಳಿ ಹಾಕಿರುವ ಇಸ್ರೇಲ್‌, ದಕ್ಷಿಣ ಲೆಬನಾನ್‌ನ ಖಾನಾ, ನಬತಿ ಹಾಗೂ ರಾಜಧಾನಿ ಬೈರೂತ್‌ ಮೇಲೆ ತೀವ್ರ ವಾಯುದಾಳಿ ನಡೆಸಿದೆ. ಈ ದಾಳಿಗಳಲ್ಲಿ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ.

‘ಖಾನಾ ನಗರವೊಂದರಲ್ಲಿಯೇ 15 ಮಂದಿ ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ’ ಎಂದು ಲೆಬನಾನ್‌ ರಕ್ಷಣಾ ಸಚಿವಾಲಯ ಹೇಳಿದೆ. ಈ ದಾಳಿಯ ಬಗ್ಗೆ ಇಸ್ರೇಲ್‌ ಈವರೆಗೂ ಪ್ರತಿಕ್ರಿಯಿಸಿಲ್ಲ.

ADVERTISEMENT

ಇಸ್ರೇಲ್‌ ದಾಳಿಗೆ ಈ ನಗರದ ನಾಗರಿಕರು, ಪುಟ್ಟ ಕಂದಮ್ಮಗಳು ಮೃತಪಟ್ಟಿರುವ ಕರಾಳ ಇತಿಹಾಸವಿದೆ. ಇಸ್ರೇಲ್‌–ಹಿಜ್ಬುಲ್ಲಾ ಸಂಘರ್ಷದ ಕಾರಣಕ್ಕಾಗಿ 1996ರಲ್ಲಿ ವಿಶ್ವಸಂಸ್ಥೆಯು ಖಾನಾ ನಗರದ ನೂರಾರು ಮಂದಿಗೆ ತನ್ನ ನೆಲೆಯಲ್ಲಿ ಆಶ್ರಯ ನೀಡಿತ್ತು. ಇಸ್ರೇಲ್‌ ಈ ನೆಲೆಯ ಮೇಲೆ ದಾಳಿ ನಡೆಸಿದ್ದರ ಪರಿಣಾಮ 100 ಮಂದಿ ನಾಗರಿಕರು ಮೃತಪಟ್ಟಿದ್ದರು. ಇನ್ನು 2006ರಲ್ಲಿ ಇಸ್ರೇಲ್‌ ಇಲ್ಲಿನ ವಸತಿ ಸಮುಚ್ಚಯದ ಮೇಲೆ ದಾಳಿ ನಡೆಸಿತ್ತು. ಆ ವೇಳೆ 36 ಮಂದಿ ಮೃತಪಟ್ಟಿದ್ದರು.
ಮೃತರಲ್ಲಿ ಮುಕ್ಕಾಲು ಮಂದಿ ಕಂದಮ್ಮಗಳೇ ಆಗಿದ್ದವು.

ಬೈರೂತ್‌ ನಂತರ, ನಬತಿ ನಗರವು ಹಿಜ್ಬುಲ್ಲಾ ಸಂಘಟನೆಯ ಹಿಡಿತದಲ್ಲಿರುವ ಮತ್ತೊಂದು ನಗರ. ಈ ನಗರದ ಕಾರ್ಪೊರೇಷನ್‌ ಕಟ್ಟಡದ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ದಾಳಿಯಲ್ಲಿ ಈ ನಗರದ ಮೇಯರ್‌ ಅಹಮದ್‌ ಖಾಯಿಲ್‌ ಸೇರಿ ಐವರು ಮೃತಪಟ್ಟಿ ದ್ದಾರೆ. ದಾಳಿಗೆ ಇಡೀ ನಗರವೇ ಹೊಗೆಯಿಂದ ಆವೃತವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

‘ಬೈರೂತ್‌ ಮೇಲೆ ದಾಳಿ ನಡೆಸದಂತೆ ಇಸ್ರೇಲ್‌ಗೆ ಸೂಚಿಸಲಾಗುವುದು’ ಎಂದು ಅಮೆರಿಕ ಭರವಸೆ ನೀಡಿದೆ’ ಎಂದು ಲೆಬನಾನ್‌ನ ಹಂಗಾಮಿ ಪ್ರಧಾನಿ ನಜೀಬ್‌ ಮಿಖಾತಿ ಹೇಳಿದ್ದರು. ಆದರೆ, 6 ದಿನಗಳ ವಿರಾಮದ ಬಳಿಕ ಬೈರೂತ್‌ ಮೇಲೆ ಇಸ್ರೇಲ್‌ ಬುಧವಾರ ದಾಳಿ ನಡೆಸಿದೆ. 

ಮೆಲೊನಿ ಭೇಟಿ: ‘ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಶುಕ್ರವಾರ ಜೋರ್ಡಾನ್‌ನ ರಾಜ ಹಾಗೂ ಲೆಬನಾನ್‌ನ ಪ್ರಧಾನಿಯನ್ನು ಬೈರೂತ್‌ನಲ್ಲಿ ಭೇಟಿಯಾಗಲಿದ್ದಾರೆ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

‘ಮಾತು ಕೇಳುವ ಇತಿಹಾಸ ಇಸ್ರೇಲ್‌ಗಿಲ್ಲ’

‘ಇರಾನ್‌ನ ಅಣ್ವಸ್ತ್ರ ಸಂಗ್ರಹಾಗಾರ ಹಾಗೂ ತೈಲ ಘಟಕಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್‌ ಭರವಸೆ ನೀಡಿದೆ. ಆದರೆ, ಇಸ್ರೇಲ್‌ ತನ್ನ ಎಲ್ಲ ಭರವಸೆಗಳನ್ನು ಉಳಿಸಿಕೊಂಡ ಉದಾಹರಣೆಗಳು ವಿರಳ’ ಎಂದು ಅಮೆರಿಕದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಲೆಬನಾನ್‌ನಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸುವ ಅಮೆರಿಕ ಹಾಗೂ ಫ್ರಾನ್ಸ್‌ನ ಪ್ರಸ್ತಾವವನ್ನು ಸ್ವಾಗತಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ನೇತನ್ಯಾಹು ಅವರು ಹೇಳಿದ್ದರು. ಆದರೆ, ಹೀಗೆ ಹೇಳಿದ ಎರಡನೇ ದಿನದಲ್ಲಿ ಲೆಬನಾನ್‌ ಮೇಲೆ ದಾಳಿ ನಡೆಸಿ, ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ನಸ್ರಲ್ಲಾ ಅವರನ್ನು ಹತ್ಯೆ ಮಾಡಿತು’ ಎಂದರು.

‘ಮುಂದಿನ 30 ದಿನಗಳ ಒಳಗೆ ಗಾಜಾದೊಳಗೆ ಹೆಚ್ಚು ಮಾನವೀಯ ನೆರವು ತಲುಪುವುದಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸಲಾಗುವುದು’ ಎಂದು ಅಮೆರಿಕವು ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ’ ಎಂದೂ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.