ADVERTISEMENT

ಲೆಬನಾನ್‌ನತ್ತ ವಿಶ್ವದ ಸಹಾಯಹಸ್ತ: ಅಮೆರಿಕದಿಂದ ₹1,135 ಕೋಟಿ ನೆರವು

ಅಮೆರಿಕದಿಂದ ₹1,135 ಕೋಟಿ ನೆರವು*ಹಲವು ದೇಶಗಳಿಂದ ಹರಿದುಬದಲಿದೆ ₹8,400 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:23 IST
Last Updated 24 ಅಕ್ಟೋಬರ್ 2024, 14:23 IST
ದಕ್ಷಿಣ ಗಾಜಾ ಪಟ್ಟಿಯಲ್ಲಿನ ಬೇಕರಿಯೊಂದರಲ್ಲಿ ಬ್ರೆಡ್‌ಗಾಗಿ ಕೈಯೊಡ್ಡಿ ನಿಂತವರ ಹಿಂಡು ಮನ ಕಲಕುವಂತಿದೆ. ಕಿಂಡಿಯಿಂದ ಬ್ರೆಡ್‌ನ ಚೀಲವನ್ನು ಎಸೆದೊಡನೆ ಅದನ್ನು ಹಿಡಿಯಲು ತುದಿಗಾಲಲ್ಲಿ ನಿಂತ ಹಸಿದೊಡಲುಗಳು ಅಸಂಖ್ಯ.
–ಎಎಫ್‌ಪಿ ಚಿತ್ರ
ದಕ್ಷಿಣ ಗಾಜಾ ಪಟ್ಟಿಯಲ್ಲಿನ ಬೇಕರಿಯೊಂದರಲ್ಲಿ ಬ್ರೆಡ್‌ಗಾಗಿ ಕೈಯೊಡ್ಡಿ ನಿಂತವರ ಹಿಂಡು ಮನ ಕಲಕುವಂತಿದೆ. ಕಿಂಡಿಯಿಂದ ಬ್ರೆಡ್‌ನ ಚೀಲವನ್ನು ಎಸೆದೊಡನೆ ಅದನ್ನು ಹಿಡಿಯಲು ತುದಿಗಾಲಲ್ಲಿ ನಿಂತ ಹಸಿದೊಡಲುಗಳು ಅಸಂಖ್ಯ. –ಎಎಫ್‌ಪಿ ಚಿತ್ರ   

ಪ್ಯಾರಿಸ್: ಯುದ್ಧದಿಂದ ನಲುಗಿರುವ ಲೆಬನಾನ್‌ಗೆ 10 ಕೋಟಿ ಯೂರೊ (900 ಕೋಟಿ ರೂಪಾಯಿಗೂ ಹೆಚ್ಚು) ನೆರವು ನೀಡುವುದಾಗಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್‌ ಭರವಸೆ ನೀಡಿದ್ದಾರೆ. ಅಂತರರಾಷ್ಟ್ರೀಯ ಸಮಾವೇಶವೊಂದರಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಗುರುವಾರ ಅವರು ಇಷ್ಟು ದೊಡ್ಡ ಮೊತ್ತದ ನೆರವು ನೀಡುವ ವಾಗ್ದಾನ ಮಾಡಿದ್ದಾರೆ. 

ಪ್ಯಾರಿಸ್‌ನಲ್ಲಿ ನಡೆದ ಸಮಾವೇಶದಲ್ಲಿ 70 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆ ಪೈಕಿ ಅನೇಕ ದೇಶಗಳ ಪ್ರತಿನಿಧಿಗಳು ಲೆಬನಾನ್‌ಗೆ ಸಹಾಯಹಸ್ತ ಚಾಚುವ ಭರವಸೆ ನೀಡಿದರು. ಲೆಬನಾನ್‌ಗೆ 35 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಸುಮಾರು ಒಂದು ಶತಕೋಟಿ ಡಾಲರ್‌ನಷ್ಟು ನೆರವು ನೀಡಲು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುತೇಕ ರಾಷ್ಟ್ರಗಳು ಒಪ್ಪಿಗೆ ನೀಡಿವೆ ಎಂದು ಫ್ರಾನ್ಸ್‌ ವಿದೇಶಾಂಗ ಸಚಿವ ಜೀನ್ ನೊಯೆಲ್ ಬರೊಟ್ ಮಾಹಿತಿ ನೀಡಿದ್ದಾರೆ. 

ಸಂತ್ರಸ್ತರಿಗೆ ನೆರವನ್ನು ಸಮರ್ಪಕ ರೀತಿಯಲ್ಲಿ ತಲುಪಿಸುವ ಸವಾಲಿನ ಕುರಿತೂ ಸಮಾವೇಶದಲ್ಲಿ ಚರ್ಚೆ ನಡೆಯಿತು.

ADVERTISEMENT

ಗಾಜಾಗೆ ₹1,135 ಕೋಟಿ ನೆರವು ಘೋಷಿಸಿದ ಅಮೆರಿಕ (ಗಾಜಾ ವರದಿ): ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಗಾಜಾ ಪಟ್ಟಿಯಲ್ಲಿರುವ ಯುದ್ಧ ಸಂತ್ರಸ್ತ ಜನರಿಗಾಗಿ ₹1,135 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. 

ಗುರುವಾರ ಕತಾರ್‌ನಲ್ಲಿ ಮಾತನಾಡಿದ ಅವರು ‘ಈ ನೆರವು ಇದೀಗ ಗಾಜಾ ಪಟ್ಟಿಗೆ ಅನಿವಾರ್ಯವಾಗಿದೆ. ಯುದ್ಧ ಪೀಡಿತ ಗಾಜಾಗೆ ಹೆಚ್ಚಿನ ನೆರವು ನೀಡಲು ಅನುವು ಮಾಡಿಕೊಡುವಂತೆ ಇಸ್ರೇಲ್‌ ಮೇಲೆ ಅಮೆರಿಕ ಒತ್ತಡ ಹೇರುತ್ತದೆ’ ಎಂದು ಹೇಳಿದರು. 

ಇಸ್ರೇಲ್ ದಾಳಿ...

ನಿರಾಶ್ರಿತ ಶಿಬಿರದ 17 ಮಂದಿ ಸಾವು ಡೇರ್ ಅಲ್–ಬಾಲಾ (ಗಾಜಾ ಪಟ್ಟಿ ಎಪಿ): ಕೇಂದ್ರ ಗಾಜಾ ಪಟ್ಟಿಯಲ್ಲಿ ನಿರಾಶ್ರಿತರಾದವರಿಗೆ ನೆಲೆ ಒದಗಿಸಿದ್ದ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೈನ್‌ನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.  ನಸೀರತ್‌ನಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಗುರುವಾರ ನಡೆದ ದಾಳಿಯಲ್ಲಿ 32 ಮಂದಿ ಗಾಯಗೊಂಡಿದ್ದಾರೆ ಎಂದು ಆವ್ಡಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ದಾಳಿ ಕುರಿತು ಇಸ್ರೇಲ್ ಸೇನೆಯು ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಲೆಬನಾನ್‌ನ ಮೂವರು ಸೈನಿಕರ ಹತ್ಯೆ (ಬೈರೂತ್ ವರದಿ): ಲೆಬನಾನ್‌ನ ದಕ್ಷಿಣ ಭಾಗದ ಯಾಟರ್ ನಗರದ ಹೊರವಲಯದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದಾಗಿ ಲೆಬನಾನ್‌ನ ಮೂವರು ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.