ADVERTISEMENT

Israeli–Palestinian conflict: ಗಾಜಾ ಪ್ರದೇಶ ಧ್ವಂಸಗೊಳಿಸಿದ ಇಸ್ರೇಲ್

ಎಎಫ್‌ಪಿ
ಎಪಿ
Published 11 ಅಕ್ಟೋಬರ್ 2023, 16:16 IST
Last Updated 11 ಅಕ್ಟೋಬರ್ 2023, 16:16 IST
<div class="paragraphs"><p>ಗಾಜಾ ಪ್ರದೇಶ</p></div>

ಗಾಜಾ ಪ್ರದೇಶ

   

ಜೆರುಸಲೇಂ/ಗಾಜಾ: ಹಮಾಸ್ ಬಂಡುಕೋರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯು ಗಾಜಾ ಪ್ರದೇಶಗಳನ್ನು ಧ್ವಂಸಗೊಳಿಸಿದೆ. ಇದರ ಪರಿಣಾಮವಾಗಿ ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಪ್ಯಾಲೆಸ್ಟೀನ್‌ ಜನರಿಗೆ ಸುರಕ್ಷಿತ ಸ್ಥಳವೆಂಬುದೇ ಇಲ್ಲದಂತಾಗಿದೆ.

ಅಲ್ಲಿನ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳು, ಔಷಧಗಳ ಪೂರೈಕೆ ಇಲ್ಲವಾಗಿದೆ. ಗಾಜಾ ಪಟ್ಟಿಯಲ್ಲಿನ ಏಕೈಕ ವಿದ್ಯುತ್ ಉತ್ಪಾದನಾ ಘಟಕಕ್ಕೆ ಇಂಧನ ಪೂರೈಕೆಯನ್ನು ನಿಲ್ಲಿಸಲಾಗಿದ್ದು, ಬುಧವಾರದಿಂದ ಅದು ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ಗಾಜಾದ ವಿದ್ಯುತ್ ಪ್ರಾಧಿಕಾರ ತಿಳಿಸಿದೆ.

ADVERTISEMENT

ಗಾಜಾ ಪಟ್ಟಿಯ ಮೇಲೆ ನಡೆದ ಇಸ್ರೇಲ್ ವಾಯುದಾಳಿಯು ಅಲ್ಲಿನ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಉರುಳಿಬಿದ್ದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳ ಲೆಕ್ಕ ಸಿಕ್ಕಿಲ್ಲ. ಹಮಾಸ್ ಬಂಡುಕೋರರು ಅಂದಾಜು 150 ಮಂದಿ ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದರೂ, ಇಸ್ರೇಲ್ ವಾಯುದಾಳಿ ಮುಂದುವರಿದಿದೆ.

ಬಂಡುಕೋರರು ಇಸ್ರೇಲ್‌ನ ದಕ್ಷಿಣ ಭಾಗದ ಆಸ್ಕೆಲಾನ್ ಪಟ್ಟಣ ಸೇರಿದಂತೆ ವಿವಿಧೆಡೆ ಬುಧವಾರ ರಾಕೆಟ್ ದಾಳಿ ನಡೆಸಿದ್ದಾರೆ. ಈ ಯುದ್ಧದಲ್ಲಿ ಇಸ್ರೇಲ್ ಹಾಗೂ ಗಾಜಾ ಪಟ್ಟಿಯಲ್ಲಿ ಇದುವರೆಗೆ ಕನಿಷ್ಠ 2,200 ಮಂದಿ ಸಾವನ್ನಪ್ಪಿದ್ದಾರೆ. 

ಗಾಜಾ ಪಟ್ಟಿಯ ಸುತ್ತ ದಿಗ್ಬಂಧನ ವಿಧಿಸಿ ಅಲ್ಲಿಗೆ ನೀರು, ಆಹಾರ, ಇಂಧನ ಮತ್ತು ಔಷಧಗಳ ಪೂರೈಕೆಯನ್ನು ಇಸ್ರೇಲ್‌ ಈಗಾಗಲೇ ಸ್ಥಗಿತಗೊಳಿಸಿದೆ. ಗಾಜಾ ಪಟ್ಟಿಯ ಜನರಿಗೆ ನೆರೆಯ ಈಜಿಪ್ಟ್‌ ಜೊತೆಗಿನ ಸಂಪರ್ಕಕ್ಕೆ ಇದ್ದ ಮಾರ್ಗವು ಮಂಗಳವಾರದ ವೈಮಾನಿಕ ದಾಳಿಯ ನಂತರ ಬಂದ್ ಆಗಿದೆ.

ಪ್ಯಾಲೆಸ್ಟೀನ್‌ ಜನರು ವಿಶ್ವಸಂಸ್ಥೆಯ ಶಾಲೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗೆ ಸುರಕ್ಷಿತವಾದ ಸ್ಥಳಗಳು ಕಡಿಮೆಯಾಗುತ್ತಿವೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾರ್ಗವೊಂದನ್ನು ನಿರ್ಮಿಸಿಕೊಡಬೇಕು ಎಂದು ನೆರವು ಒದಗಿಸುವ ತಂಡಗಳು ಮನವಿ ಮಾಡಿವೆ. 

ಡಾಕ್ಟರ್ಸ್‌ ವಿದೌಟ್ ಬಾರ್ಡರ್ಸ್ ಸಂಘಟನೆಯು ಗಾಜಾದಲ್ಲಿ ಎರಡು ಆಸ್ಪತ್ರೆಗಳನ್ನು ನಡೆಸುತ್ತಿದೆ. ಆದರೆ ಅಲ್ಲಿ ಕೆಲವು ಉಪಕರಣಗಳು, ಔಷಧಿಗಳು ಮತ್ತು ಇಂಧನ ಖಾಲಿಯಾಗುತ್ತಿದೆ ಎಂದು ತಿಳಿಸಿದೆ. ‘ಎಲ್ಲ ಬಗೆಯ ನಿರ್ಬಂಧಗಳನ್ನೂ ನಾನು ತೆಗೆದುಹಾಕಿದ್ದೇನೆ. ನಮ್ಮ ವಿರುದ್ಧವಾಗಿ ಹೋರಾಡುವ ಎಲ್ಲರನ್ನೂ ನಾವು ಇಲ್ಲವಾಗಿಸುತ್ತೇವೆ. ನಮ್ಮ ಕೈಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸಿಕೊಳ್ಳುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ.

‘ಹಮಾಸ್‌ಗೆ ಬದಲಾವಣೆ ಬೇಕಿತ್ತು. ಬದಲಾವಣೆಯು ಅದಕ್ಕೆ ಸಿಗಲಿದೆ. ಗಾಜಾದಲ್ಲಿ ಹಿಂದೆ ಇದ್ದಿದ್ದು ಮುಂದೆ ಇರುವುದಿಲ್ಲ. ನಾವು ವೈಮಾನಿಕ ದಾಳಿ ಆರಂಭಿಸಿದ್ದೇವೆ. ಮುಂದೆ ನಾವು ಭೂಸೇನೆಯ ದಾಳಿಯನ್ನೂ ಆರಂಭಿಸುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ.

ಗಾಜಾ ಪಟ್ಟಿಯ ಖಾನ್ ಯೂನಿಸ್‌ ಮೇಲೆ ಮಂಗಳವಾರ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ನಾಯಕ ಮೊಹಮ್ಮದ್ ದೈಫ್‌ನ ತಂದೆ, ಸಹೋದರ ಮತ್ತು ಇತರ ಇಬ್ಬರು ಸಂಬಂಧಿಗಳು ಮೃತಪಟ್ಟಿದ್ದಾರೆ ಎಂದು ಹಮಾಸ್‌ನ ಹಿರಿಯ ನಾಯಕ ಬಸ್ಸೆಂ ನಯೀಂ ತಿಳಿಸಿದ್ದಾರೆ. ದೈಫ್ ಯಾವತ್ತೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆತ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ.

ಇಸ್ರೇಲ್‌ನ ಉತ್ತರ ಭಾಗದಲ್ಲಿ ಲೆಬನಾನ್ ಹಾಗೂ ಸಿರಿಯಾದ ಉಗ್ರರ ಜೊತೆ ಕೂಡ ಗುಂಡಿನ ಚಕಮಕಿ ನಡೆದಿದೆ. ಇದು ಈಗಿನ ಸಂಘರ್ಷವು ವ್ಯಾಪಕಗೊಳ್ಳುವ ಭೀತಿಯನ್ನು ಸೃಷ್ಟಿಸಿದೆ. ಇಸ್ರೇಲ್‌ನ ಶೆಲ್‌ ದಾಳಿಯು ಲೆಬನಾನ್‌ನ ದಕ್ಷಿಣ ಭಾಗದ ಪಟ್ಟಣಗಳಿಗೆ ಹಾನಿ ಮಾಡಿದೆ.

‘ಇಸ್ರೇಲ್‌ನಲ್ಲಿ ಇದ್ದೇವೆ’: ಈ ನಡುವೆ, ‘ಇಸ್ರೇಲ್‌ನ ಗಡಿಯ ಒಳಗೆ ನಾವು ಇನ್ನೂ ಹೋರಾಟ ನಡೆಸುತ್ತಿದ್ದೇವೆ’ ಎಂದು ಹಮಾಸ್ ಸಂಘಟನೆಯು ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.