ADVERTISEMENT

Israel Gaza war: ಇಸ್ರೇಲ್‌ ದಾಳಿಗೆ ಗಾಜಾದಲ್ಲಿ 22 ಸಾವು

ಟೆಲ್‌ ಅವೀವ್‌: ಬಸ್‌ ತಂಗುದಾಣಕ್ಕೆ ನುಗ್ಗಿದ ಟ್ರಕ್; 35 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:07 IST
Last Updated 27 ಅಕ್ಟೋಬರ್ 2024, 16:07 IST
<div class="paragraphs"><p>ಪ್ಯಾಲೆಸ್ಟೀನ್‌ನ ಗಾಜಾ ನಗರದ ಮೇಲೆ ಇಸ್ರೇಲ್‌ ದಾಳಿ (ಸಂಗ್ರಹ ಚಿತ್ರ)</p></div>

ಪ್ಯಾಲೆಸ್ಟೀನ್‌ನ ಗಾಜಾ ನಗರದ ಮೇಲೆ ಇಸ್ರೇಲ್‌ ದಾಳಿ (ಸಂಗ್ರಹ ಚಿತ್ರ)

   

ಟೆಲ್‌ ಅವೀವ್: ಉತ್ತರ ಗಾಜಾದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 22 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. 

ಉತ್ತರ ಗಾಜಾದ ಬೈತ್‌ ಲಾಹಿಯಾ ಪಟ್ಟಣದ ಹಲವು ಮನೆಗಳು ಮತ್ತು ಕಟ್ಟಡಗಳನ್ನು ಗುರಿಯಾಗಿಸಿ ಶನಿವಾರ ರಾತ್ರಿ ದಾಳಿ ನಡೆಸಲಾಗಿದೆ. ಮೃತರಲ್ಲಿ 11 ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ದಾಳಿಯಲ್ಲಿ 15 ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚುವ ಆತಂಕವಿದೆ ಎಂದು ಹೇಳಿದೆ.

ADVERTISEMENT

‘ಬೈತ್‌ ಲಾಹಿಯಾದಲ್ಲಿರುವ ಬಂಡುಕೋರರ ಅಡಗುತಾಣ ಗುರಿಯಾಗಿಸಿ ನಿರ್ದಿಷ್ಟ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. 

ಬಸ್‌ ತಂಗುದಾಣಕ್ಕೆ ನುಗ್ಗಿದ ಟ್ರಕ್: ಟೆಲ್‌ ಅವೀವ್‌ ನಗರದ ಬಳಿಯ ಬಸ್‌ ತಂಗುದಾಣವೊಂದಕ್ಕೆ ವ್ಯಕ್ತಿಯೊಬ್ಬ ಟ್ರಕ್‌ಅನ್ನು ನುಗ್ಗಿಸಿದ ಪರಿಣಾಮ 35 ಮಂದಿ ಗಾಯಗೊಂಡಿದ್ದಾರೆ.

ಇದು ಅಪಘಾತವೇ ಅಥವಾ ಟ್ರಕ್‌ ಅನ್ನು ಉದ್ದೇಶಪೂರ್ವಕವಾಗಿ ಜನರ ಮೇಲೆ ನುಗ್ಗಿಸಲಾಗಿದೆಯೇ ಎಂಬುದು ಖಚಿತವಾಗಿಲ್ಲ. ಇಸ್ರೇಲ್‌ನ ಇಂಟೆಲಿಜೆನ್ಸ್‌ ಏಜೆನ್ಸಿ ಮೊಸಾದ್‌ನ ಕೇಂದ್ರ ಕಚೇರಿಯ ಬಳಿ ಈ ಘಟನೆ ನಡೆದಿದೆ.

‘ಅಧಿಕಾರಿಗಳು ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂಬುದಾಗಿ ಪರಿಗಣಿಸಿದ್ದಾರೆ’ ಎಂದು ಇಸ್ರೇಲ್‌ ಪೊಲೀಸ್‌ನ ವಕ್ತಾರ ಅಸಿ ಅಹರೊನಿ ಹೇಳಿದ್ದಾರೆ. ದಾಳಿಕೋರನನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ.

ಜನರ ಮೇಲೆ ವಾಹನಗಳನ್ನು ನುಗ್ಗಿಸಿದ ಹಲವು ಘಟನೆಗಳು ಇಸ್ರೇಲ್‌ನಲ್ಲಿ ಈ ಹಿಂದೆ ನಡೆದಿವೆ. 

ನಾವು ನಡೆಸಿರುವ ದಾಳಿಯು ಇರಾನ್‌ಗೆ ತೀವ್ರ ಹಾನಿಯನ್ನುಂಟುಮಾಡಿದೆ ಮತ್ತು ಇಸ್ರೇಲ್‌ ತನ್ನ ಎಲ್ಲಾ ಗುರಿಗಳನ್ನು ಸಾಧಿಸಿದೆ.
–ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ

ಇರಾನ್‌: ಎರಡು ಸೇನಾ ನೆಲೆಗಳಿಗೆ ಹಾನಿ

ದುಬೈ: ಇಸ್ರೇಲ್‌ ಸೇನೆ ಶನಿವಾರ ನಡೆಸಿದ ದಾಳಿಯಲ್ಲಿ ಇರಾನ್‌ನ ಎರಡು ಸೇನಾ ನೆಲೆಗಳಿಗೆ ಹಾನಿಯಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಟೆಹರಾನ್‌ನ ಹೊರವಲಯದಲ್ಲಿರುವ ಪಾರ್ಚಿನ್‌ ಸೇನಾ ನೆಲೆಯಲ್ಲಿ ಕೆಲವು ಕಟ್ಟಡಗಳು ಧ್ವಂಸಗೊಂಡಿರುವುದನ್ನು ಚಿತ್ರಗಳು ದೃಢಪಡಿಸಿವೆ.

ಇರಾನ್‌ ತನ್ನ ಅಣ್ವಸ್ತ್ರ ಯೋಜನೆಗೆ ಈ ಹಿಂದೆ ಇದೇ ನೆಲೆಯನ್ನು ಬಳಸಿಕೊಂಡಿತ್ತು. ಖೊಜಿರ್ ಸೇನಾ ನೆಲೆಯೂ ಇಸ್ರೇಲ್‌ ದಾಳಿಯಿಂದ ಹಾನಿಗೊಳಗಾಗಿದೆ. ಈ ಸೇನಾ ನೆಲೆಯು ಕ್ಷಿಪಣಿ ತಯಾರಿಕಾ ಘಟಕವನ್ನು ಒಳಗೊಂಡಿದೆ ಎನ್ನಲಾಗಿದೆ. ಆದರೆ ಇಸ್ರೇಲ್ ನಡೆಸಿದ ದಾಳಿಯಿಂದ ಆಗಿರುವ ಹಾನಿ ಬಗ್ಗೆ ಇರಾನ್‌ ಸೇನೆ ಯಾವುದೇ ಹೇಳಿಕೆ ನೀಡಿಲ್ಲ.

‘ವಾಯುದಾಳಿ ತಡೆ ವ್ಯವಸ್ಥೆ’ಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಯೋಧರು ಬಲಿಯಾಗಿದ್ದಾರೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.