ADVERTISEMENT

ಅಮೆರಿಕದ ಮಾತು ಕೇಳುವುದಿಲ್ಲ: ಇಸ್ರೇಲ್‌

ಇರಾನ್‌ಗೆ ಪ್ರತ್ಯುತ್ತರ: ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಪ್ರಧಾನಿ ಕಚೇರಿ

ಏಜೆನ್ಸೀಸ್
Published 15 ಅಕ್ಟೋಬರ್ 2024, 13:19 IST
Last Updated 15 ಅಕ್ಟೋಬರ್ 2024, 13:19 IST
<div class="paragraphs"><p>ಬೆಂಜಮಿನ್‌ ನೇತನ್ಯಾಹು</p></div>

ಬೆಂಜಮಿನ್‌ ನೇತನ್ಯಾಹು

   

ಜೆರುಸಲೆಂ/ರೋಮ್‌: ‘ನಮ್ಮ ಮೇಲೆ ಇರಾನ್‌ ಸಿಡಿಸಿದ 200 ಕ್ಷಿಪಣಿಗಳಿಗೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂದು ಅಮೆರಿಕವನ್ನು ಕೇಳಿ ನಾವು ನಿರ್ಧರಿಸುವುದಿಲ್ಲ. ನಮ್ಮ ‘ದೇಶದ ಹಿತಾಸಕ್ತಿ’ಗೆ ಅನುಗುಣವಾಗಿ ನಾವೇ ನಿರ್ಧರಿಸುತ್ತೇವೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ಕಚೇರಿ ಮಂಗಳವಾರ ಹೇಳಿದೆ.

ಇರಾನ್‌ನ ಪ್ರಮುಖ ಕಮಾಂಡರ್‌ ಇಸ್ಮಾಯಿಲ್‌ ಖಾನಿ ಅವರು ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇಸ್ರೇಲ್‌ನ ವಾಯುದಾಳಿಯಲ್ಲಿ ಖಾನಿ ಅವರ ಹತ್ಯೆ ಆಗಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಮಂಗಳವಾರ ಖಾನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ನೇತನ್ಯಾಹು ಕಚೇರಿ ಈ ಹೇಳಿಕೆ ನೀಡಿದೆ.

ADVERTISEMENT

‘ಅಮೆರಿಕದ ಅಭಿಪ್ರಾಯವನ್ನು ನಾವು ಕೇಳುತ್ತೇವೆ. ಆದರೆ, ನಮ್ಮದೇ ಅಂತಿಮ ನಿರ್ಧಾರವಾಗಿರಲಿದೆ’ ಎಂದು ಇಸ್ರೇಲ್‌ ಹೇಳಿದೆ. ಕೆಲವು ದಿನಗಳ ಹಿಂದೆ ನೇತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ‘ಇರಾನ್‌ನ ಅಣುಸ್ಥಾವರ ಹಾಗೂ ತೈಲ ಘಟಕಗಳ ಮೇಲೆ ದಾಳಿ ನಡೆಸಬಾರದು’ ಎಂದು ಅಮೆರಿಕವು ಇಸ್ರೇಲ್‌ಗೆ ಈ ವೇಳೆ ಎಚ್ಚರಿಕೆ ನೀಡಿತ್ತು. 

ಇದಕ್ಕೆ ಉತ್ತರಿಸಿದ್ದ ಇಸ್ರೇಲ್‌, ‘ನಾವು ಸೇನಾ ನೆಲೆಗಳ ಮೇಲೆ ಅಷ್ಟೇ ಗುರಿ ಇರಿಸಿದ್ದೇವೆ’ ಎಂದು ಹೇಳಿತ್ತು. ಆದರೆ, ಮಂಗಳವಾರದ ಹೊತ್ತಿಗೆ ಇಸ್ರೇಲ್‌ ಬೇರೆಯದೇ ಧ್ವನಿಯಲ್ಲಿ ಹೇಳಿಕೆ ನೀಡಿದೆ. ಇಸ್ರೇಲ್‌–ಅಮೆರಿಕ ಮಾತುಕತೆಗಳ ಬಗ್ಗೆ ‘ವಾಷಿಂಗ್ಟನ್ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.