ಜೆರುಸಲೇಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಜಾಗೊಳಿಸಿದ ಬೆನ್ನಲ್ಲೇ, ರಕ್ಷಣಾ ಸಚಿವ ಸ್ಥಾನವನ್ನು ಯೊವ ಗ್ಯಾಲಂಟ್ ಅವರು ಶುಕ್ರವಾರ ಅಧಿಕೃತವಾಗಿ ತೊರೆದಿದ್ದಾರೆ.
ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಸರ್ಕಾರದಲ್ಲಿ ಮಧ್ಯಮ ಮಾರ್ಗ ಅನುಸರಿಸುತ್ತಿರುವ ಗ್ಯಾಲಂಟ್ ಅವರ ಕುರಿತು ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಹಮಾಸ್ ಬಂಡುಕೋರರು ಗಾಜಾದಲ್ಲಿ ಒತ್ತೆಯಾಳಾಗಿರಿಸಿರುವ ಇಸ್ರೇಲ್ ನಾಗರಿಕರನ್ನು ಸುರಕ್ಷಿತವಾಗಿ ಮರಳಿ ತರುವ ಕುರಿತು ಭರವಸೆ ಕಳೆದುಕೊಂಡಿರುವ ಅಲ್ಲಿನ ಜನರು, ಗ್ಯಾಲಂಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಅವರನ್ನು ವಜಾಗೊಳಿಸಲು ವ್ಯಾಪಕ ಒತ್ತಾಯ ಕೇಳಿಬಂದಿತ್ತು.
ತಮ್ಮ ಹುದ್ದೆಯನ್ನು ತೊರೆದ ನಂತರ ಸೈನಿಕರಿಗೆ ಗ್ಯಾಲಂಟ್ ಧನ್ಯವಾದ ಹೇಳಿದರು. ‘ನಮ್ಮ ಉದ್ದೇಶ ಇನ್ನೂ ಪೂರ್ಣಗೊಂಡಿಲ್ಲ. ನಾವು ನಮ್ಮ ನೈತಿಕ ಹಾಗೂ ಸಾಂಪ್ರದಾಯಿಕ ಬಾಧ್ಯತೆಗಳನ್ನು ಪೂರೈಸಬೇಕು. ತಮ್ಮ ಮನೆಗಳಿಗೆ ಹಿಂದಿರುಗದ 101 ಒತ್ತೆಯಾಳುಗಳನ್ನು ಮನೆಗೆ ಕರೆತರುವುದೇ ಈ ಯುದ್ಧದ ಮುಖ್ಯ ಉದ್ದೇಶವಾಗಿದೆ’ ಎಂದರು.
ಇಸ್ರೇಲ್‌ನ ನೂತನ ರಕ್ಷಣಾ ಸಚಿವರಾಗಿ ಇಸ್ರೇಲ್ ಕಾಟ್ಜ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಿದೇಶಾಂಗ ಸಚಿವರಾಗಿದ್ದಾರೆ. ನೆತನ್ಯಾಹು ಅವರ ದೀರ್ಘಕಾಲದ ನಿಷ್ಠಾವಂತರಲ್ಲಿ ಕಾಟ್ಜ್ ಕೂಡಾ ಒಬ್ಬರು.
ಗ್ಯಾಲಂಟ್ ಅವರಿಗೆ ಧನ್ಯವಾದ ಅರ್ಪಿಸಿದ ಕಾಟ್ಜ್, ‘ಇರಾನ್ ಆಕ್ರಮಣವನ್ನು ನಿಯಂತ್ರಿಸುವುದು ಹಾಗೂ ಅದರ ಸಾಮರ್ಥ್ಯವನ್ನು ತಗ್ಗಿಸುವುದು, ಹಮಾಸ್ ಆಡಳಿತ ಮತ್ತು ಅದರ ಸೇನಾ ಶಕ್ತಿಯನ್ನು ಕುಂದಿಸುವುದು ಹಾಗೂ ಹಿಜ್ಬುಲ್ಲಾ ಸೋಲಿಸುವುದು ನಮ್ಮ ಮುಖ್ಯ ಉದ್ದೇಶ. ಅದರಲ್ಲೂ ಒತ್ತೆಯಾಳಾಗಿರುವ ನಮ್ಮ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವುದು ಅತಿ ಮುಖ್ಯವಾದ ಕೆಲಸವಾಗಿದೆ’ ಎಂದರು.
‘ಯೋವ್ ಹಾಗೂ ನಾನು ಸ್ನೇಹಿತರಾಗಿದ್ದೇವೆ ಮತ್ತು ಸ್ನೇಹಿತರಾಗಿಯೇ ಉಳಿಯುತ್ತೇವೆ. ಏಕೆಂದರೆ ಇಸ್ರೇಲ್‌ನ ಭದ್ರತೆ ಮತ್ತು ಭವಿಷ್ಯ, ಯಹೂದಿ ರಾಜ್ಯವನ್ನು ಭದ್ರಪಡಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಯುದ್ದದಿಂದ ಇಡೀ ಇಸ್ರೇಲ್ ಹೊಸದಾಗಿ ಹಾಗೂ ಇನ್ನೂ ಪ್ರಕರವಾಗಿ ಹೊರಹೊಮ್ಮಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.